ಭಾರತೀಯ ಸೇನೆಗೆ ಆಯ್ಕೆಯಾದ ಯುವಕನ ಮೆರವಣಿಗೆ

Oplus_16908288
ಭಾರತೀಯ ಸೇನೆಗೆ ಆಯ್ಕೆಯಾದ ಇರ್ಫಾನ್ ಅವರನ್ನು ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಂಬಂಧಿಕರು ಅಭಿನಂದಿಸಿದರು.
Published on

ನಂಜನಗೂಡು: ಭಾರತೀಯ ಸೇನೆಗೆ ಆಯ್ಕೆಯಾದ ಯುವಕನನ್ನು ಸೇನೆಯ ಸಮವಸ್ತ್ರದಲ್ಲಿ ಪಟ್ಟಣದ ಬೀದಿಗಳಲ್ಲಿ ಶನಿವಾರ ಮೆರವಣಿಗೆ ನಡೆಸಿ ಅಭಿನಂದಿಸಲಾಯಿತು.

ತಾಲೂಕಿನ ಚಾಮಲಾಪುರ ಗ್ರಾಮದ ನಿವಾಸಿ, ಕೆಎಸ್‌ಆರ್‌ಟಿಸಿ ಚಾಲಕ ಅಬ್ದುಲ್ ಗಫರ್ ಹಾಗೂ ಫಾತಿಮಾ ಬೇಗಂ ದಂಪತಿ ಪುತ್ರ ಇರ್ಫಾನ್(21) ಆಯ್ಕೆಯಾದ ಯುವಕ. ಕಳೆದ ವರ್ಷ ಮಡಿಕೇರಿಯಲ್ಲಿ ನಡೆದ ಸೇನೆ ಆಯ್ಕೆಗೆ ತೆರಳಿದ್ದ ಇರ್ಫಾನ್ ಭಾರತೀಯ ಸೇನೆಗೆ ಆಯ್ಕೆಯಾಗಿದ್ದನು.

ಬೆಳಗಾವಿಯಲ್ಲಿ 7 ತಿಂಗಳು ಸೇನೆ ತರಬೇತಿ ಪೂರ್ಣಗೊಳಿಸಿ, ಭಾರತೀಯ ಸೇನೆ ಗ್ಯಾರ ಬೆಟಾಲಿಯನ್ 11 ಮರಾಠ ಲೈಫ್ ಇನ್ಫೆಂಟ್ರಿಗೆ ಸೇರ್ಪಡೆ ಆಗುತ್ತಿದ್ದಾನೆ. ಇರ್ಫಾನ್ ತನ್ನ ತಂದೆ ತಾಯಿಗೆ ಮೂರನೇ ಹಾಗೂ ಕಿರಿಯ ಮಗನಾಗಿದ್ದು, ಪದವಿ ಮುಗಿಸಿದ್ದಾನೆ. ಬಾಲ್ಯದಿಂದಲೂ ಸೇನೆಗೆ ಸೇರಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದಾನೆ. ತಂದೆ ಅಬ್ದುಲ್ ಗಫರ್ ಮಗನನ್ನು ಅಭಿನಂದಿಸಿ ಭಾವುಕರಾಗಿದ್ದಾರೆ.

ಜೂ.17ರಂದು ಮನೆಯಿಂದ ದೇಶಸೇವೆಗೆ ತೆರಳುತ್ತಿರುವ ಯುವಕನಿಗೆ ಸ್ನೇಹಿತರು, ಸಂಬಂಧಿಕರು ಮತ್ತು ಯುವ ಸೇನಾ ಸೇರಿದಂತೆ ಇತರ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದರು. ಇರ್ಫಾನ್‌ಗೆ ಆರತಿ ಬೆಳಗಿ, ಪುಷ್ಪಾರ್ಚನೆ ಮತ್ತು ಮಾಲಾರ್ಪಣೆ ಮಾಡಿ, ತೆರೆದ ಜೀಪಿನಲ್ಲಿ ನಂಜನಗೂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಬಳಿಕ ಮಾತನಾಡಿದ ಇರ್ಫಾನ್, ಸೇನೆಗೆ ಆಯ್ಕೆಯಾಗಿದ್ದು ನಿಜಕ್ಕೂ ಖುಷಿ ಆಗುತ್ತಿದೆ. ದೇಶ ಸೇವೆ ಮಾಡಬೇಕೆಂಬುದು ಹಲವು ದಿನದ ಕನಸಾಗಿತ್ತು. ಈ ಕನಸು ನನಸಾಗಿದೆ. ದೇಶಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸಲು ನನಗೆ ಸಿಕ್ಕ ದೊಡ್ಡ ಅವಕಾಶ ಇದಾಗಿದೆ. ಯಾವುದೇ ಭಯವಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net