

ಮೈಸೂರು: ಬಸವ ಜಯಂತಿ ಅಂಗವಾಗಿ ನಗರದಲ್ಲಿ ಶ್ರೀಬಸವೇಶ್ವರ ಪುತ್ಥಳಿ ಮೆರವಣಿಗೆ ನಡೆಯಿತು. ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ವೃತ್ತದ ಬಳಿ ಇರುವ ಬಸವೇಶ್ವರರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ್, ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ವಿವಿಧ ಸಮಿತಿ ಮುಖಂಡರು, ಸದಸ್ಯರು ಇದ್ದರು.
ಅಲಂಕೃತ ವಾಹನದಲ್ಲಿ ಬಸವೇಶ್ವರರ ಪುತ್ಥಳಿಯನ್ನು ನಂದಿಧ್ವಜ, ಮಂಗಳವಾದ್ಯ, ವೀರಗಾಸೆ, ಕಲಾತಂಡ, ಭಜನಾ ಮೇಳ, ಸಾರೋಟು, ವಿವಿಧ ಸ್ತಬ್ಧಚಿತ್ರಗಳೊಂದಿಗೆ ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಡಾ.ಶ್ರೀಶಿವರಾತ್ರಿ ರಾಜೇಂದ್ರ ವೃತ್ತದಿಂದ ಆರಂಭಗೊಂಡ ಮೆರವಣಿಗೆ, ಶ್ರೀಬಸವೇಶ್ವರ ವೃತ್ತ, ನ್ಯೂ ಸಯ್ಯಜಿರಾವ್ ರಸ್ತೆ, ಕೆ.ಆರ್.ವೃತ್ತ, ಡಿ.ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಮೆಟ್ರೋಪೋಲ್ ವೃತ್ತ, ಹುಣಸೂರು ರಸ್ತೆ ಮೂಲಕ ಕಲಾಮಂದಿರವನ್ನು ತಲುಪಿತು.