ನುಡಿಜಾತ್ರೆ ಮೆರವಣಿಗೆಗೆ 95 ಲಕ್ಷ ರೂ ವೆಚ್ಚ: ಎಂಎಲ್‌ಸಿ ಮಧು ಮಾದೇಗೌಡ ನೇತೃತ್ವದಲ್ಲಿ ಸಭೆ

Parade Committee Meeting Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯನ್ನು ವ್ಯವಸ್ಥಿತ ಮತ್ತು ವರ್ಣರಂಜಿತವಾಗಿ ಸಂಘಟಿಸಲು 95 ಲಕ್ಷ ರೂ.ಗಳ ತಾತ್ಕಾಲಿಕ ಅಂದಾಜು ವೆಚ್ಚದ ಬಜೆಟ್ ಅನ್ನು ಮೆರವಣಿಗೆ ಸಮಿತಿಯ ಉಪಸಮಿತಿ ಮಂಡಿಸಿದವು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮೆರವಣಿಗೆ ಸಮಿತಿ ಸಭೆಯಲ್ಲಿ ವೆಚ್ಚದ ಮಾಹಿತಿ ನೀಡಲಾಯಿತು. ಅದರಂತೆ ಕಲಾತಂಡ ಆಯ್ಕೆಗೆ 31.45 ಲಕ್ಷ ರೂ, ಸ್ತಬ್ಧಚಿತ್ರಕ್ಕೆ 21 ಲಕ್ಷ ರೂ, ಪೂರ್ಣಕುಂಭಕ್ಕೆ 1 ಲಕ್ಷ ರೂ, ಸ್ಕೌಟ್ಸ್ ಮತ್ತು ಗೈಡ್ಸ್‌ಗೆ 1.30 ಲಕ್ಷ ರೂ, ದೈಹಿಕ ಶಿಕ್ಷಣ ಶಿಕ್ಷಕರ ಮತ್ತು ಎನ್‌ಸಿಸಿ ತಂಡಗಳ ಸಂಯೋಜನೆಗೆ 1.50 ಲಕ್ಷ ರೂ, ಎತ್ತಿನಗಾಡಿ ಮತ್ತು ಆನೆಗಳ ಸಂಯೋಜನೆಗೆ 6 ಲಕ್ಷ ರೂ, ಆಟೋರಿಕ್ಷಾ ಮೆರವಣಿಗೆಗೆ 1.75 ಲಕ್ಷ ರೂ, ಸಂಘ-ಸಂಸ್ಥೆಗಳ ಸಂಯೋಜನೆಗೆ 50 ಸಾವಿರ ರೂ, ಶಾಲಾ-ಕಾಲೇಜುಗಳ ಸಂಯೋಜನೆಗೆ 50 ಸಾವಿರ ರೂ, ಸಮ್ಮೇಳನ ಅಧ್ಯಕ್ಷರ ರಥ, ಜಿಲ್ಲಾಧ್ಯಕ್ಷರ ರಥ ಸೇರಿದಂತೆ ಇನ್ನಿತರೆ ವೆಚ್ಚ ಸೇರಿ 30 ಲಕ್ಷ ರೂ ಸೇರಿದಂತೆ 95 ಲಕ್ಷ ರೂ ಅಂದಾಜು ವೆಚ್ಚದ ಮಾಹಿತಿಯನ್ನು ಉಪ ಸಮಿತಿ ಸಂಚಾಲಕರು ಮಂಡಿಸಿದರು. ಇದನ್ನು ಅ.23ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚಿಸಲು ತೀರ್ಮಾನಿಸಲಾಯಿತು.

ಸಮಿತಿಯ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಸಾಕಷ್ಟು ಬಾರಿ ಚರ್ಚಿಸಿ ಪರಿಷ್ಕರಿಸಿ ಅಂದಾಜು ವೆಚ್ಚವನ್ನು ಸಿದ್ಧಪಡಿಸಲಾಗಿದೆ. ನಮ್ಮ ಸಮಿತಿಗೆ ಎಷ್ಟು ಅನುದಾನವನ್ನು ನೀಡುತ್ತಾರೆ ಎನ್ನುವ ಮಾಹಿತಿಯಿಲ್ಲ. ಆದಾಗ್ಯೂ ಸಭೆಯು ಅನುಮೋದಿಸಿರುವ ಅಂದಾಜು ಮೊತ್ತದ ಮಾಹಿತಿಯನ್ನು ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮಂಡಿಸಿ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಲಾಗುವುದು ಎಂದು ಹೇಳಿದರು.

ಸಮಿತಿಯ ಕಾರ್ಯಾಧ್ಯಕ್ಷರೂ ಆದ ನಗರಸಭೆ ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಸದಸ್ಯ ಕಾರ್ಯದರ್ಶಿ ಬಿ.ವಿ.ನಂದೀಶ್, ಸಂಚಾಲಕ ಕಾರಸವಾಡಿ ಮಹದೇವು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಹರ್ಷ ಪಣ್ಣೆದೊಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net