

ಕುಶಾಲನಗರ
ಭಾರತೀಯ ಸೇನೆಯ ಕಮೀಷನ್ಡ್ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿರುವ ಮೇ. ಸತೀಶ್ ಡಿ. ಈ ಬಾರಿಯ ರಾಜ್ಯ ಗಣರಾಜ್ಯೋತ್ಸವ ಪರೇಡ್ ಪಥ ಸಂಚಲನದ ನಾಯಕತ್ವ ವಹಿಸಲಿದ್ದಾರೆ. 2024ರ ಗಣರಾಜ್ಯೋತ್ಸವ ಪರೇಡ್ ಕೂಡ ಇವರ ನಾಯಕತ್ವದಲ್ಲೇ ನಡೆದಿತ್ತು.
ಈ ಮೂಲಕ ಕರ್ನಾಟಕ ಸೇನಾ ಅಧಿಕಾರಿಯೊಬ್ಬರು ಸತತ 2ನೇ ಬಾರಿಗೆ ರಾಜ್ಯ ಗಣರಾಜ್ಯೋತ್ಸವ ಪರೇಡ್ ಪಥ ಸಂಚಲನದ ನಾಯಕತ್ವ ವಹಿಸುವ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ.
ಕರ್ನಾಟಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಈ ಪರೇಡ್ ನಡೆಯಲಿದೆ. ಭಾರತೀಯ ಸೇನೆ ಮತ್ತು ಕರ್ನಾಟಕ ಸರ್ಕಾರದ ನೇತೃತ್ವದಲ್ಲಿ ಆಯೋಜಿತ ಈ ವಿಶೇಷ ಕಾರ್ಯಕ್ರಮದಲ್ಲಿ ಮೇ. ಸತೀಶ್ ಸಂಪೂರ್ಣ ಪರೇಡ್ ಮೇಲ್ವಿಚಾರಣೆಯ ಕೇಂದ್ರ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇದರಲ್ಲಿ ಡ್ರಿಲ್‌ಗಳ ಶುದ್ಧತೆ, ಸಮನ್ವಯತೆ ಹಾಗೂ ಕಾರ್ಯಕ್ರಮದ ಸುಗಮತೆ ಖಚಿತಪಡಿಸಿಕೊಳ್ಳುವುದು ಅವರ ಕರ್ತವ್ಯವಾಗಿದೆ.
ಈ ಬಾರಿಯ ಪರೇಡ್‌ನಲ್ಲಿ ಭಾರತೀಯ ಸೇನೆ, ವಾಯುಪಡೆ, ಅರೆಸೇನಾ ಪಡೆಗಳು, ಕರ್ನಾಟಕ ಮತ್ತು ಕೇರಳ ಪೊಲೀಸ್, ಎನ್.ಸಿ.ಸಿ, ಮತ್ತು ವಿವಿಧ ಶೈಕ್ಷಣಿಕ ಸಂಸ್ಥೆಗಳ ಘಟಕಗಳು ಭಾಗವಹಿಸಲಿವೆ.
ಮೇ. ಸತೀಶ್ ಕೊಡಗು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಕುಶಾಲನಗರ ಮೂಲದ ಪಾವನಿ ಅವರ ಪತಿ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ನಿಡಸಾಲೆ(ಮಠದ ದೊಡ್ಡಿ) ಗ್ರಾಮದ ದೇಶಯ್ಯ (ಚಿಕ್ಕಹುಡುಗಯ್ಯ) ಮತ್ತು ಭಾಗ್ಯಮ್ಮ ದಂಪತಿಯ ಪುತ್ರ.