

ಅಳ್ನಾವರ: ತಾಲೂಕು ಕೇಂದ್ರವಾಗಿ ಐದು ವರ್ಷ ಕಳೆದಿದ್ದರೂ 21 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣ ಮಾತ್ರ ಇನ್ನೂ ಸುಧಾರಣೆ ಕಾಣದಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
ಕಳೆದ ವರ್ಷ ಪಟ್ಟಣದ ಆಜಾದ್ ರಸ್ತೆಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ ಪಟ್ಟಣ ಪಂಚಾಯಿತಿಯು ವಾಣಿಜ್ಯ ಮಳಿಗೆಗಳ ಹಿಂಬದಿ ಹಾಗೂ ರೈಲ್ವೆ ನಿಲ್ದಾಣ ರಸ್ತೆಯ ಹತ್ತಿರವಿದ್ದ ಸಾರ್ವಜನಿಕ ಮೂತ್ರಿಗಳನ್ನು ತರಕಾರಿ ಮಾರುಕಟ್ಟೆ ನಿರ್ವಣಕ್ಕೆ ಹಾಗೂ ಮುಖ್ಯ ಮಾರುಕಟ್ಟೆಯ ಸ್ಥಳದ ಸುಧಾರಣೆಗಾಗಿ ಒಡೆದು ಹಾಕಲಾಗಿದೆ. ವಾರದಲ್ಲಿ ನಡೆಯುವ ಎರಡು ಸಂತೆಗಳಿಗೆ ಹಾಗೂ ನಿತ್ಯ ಆಗಮಿಸುವ ಸುತ್ತ್ತನ ಹಳ್ಳಿಗಳ ಜನರು ಮೂತ್ರ ವಿಸರ್ಜನೆಗೆ ಪರದಾಡುವಂತಾಗಿದೆ.
ಮುಖ್ಯ ಚರಂಡಿಗಳನ್ನು ಸ್ವಚ್ಛಗೊಳಿಸದೆ ಇರುವುದರಿಂದ ದುರ್ನಾತ ಹರಡಿ ಸಾಂಕ್ರಾಮಿಕ ರೋಗ ವಕ್ಕರಿಸುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ, ಜನರು ಮೂಗು ಮುಚ್ಚಿಕೊಂಡೇ ಅಡ್ಡಾಡುವಂತಾಗಿದೆ. ಇಲ್ಲಿಯವರೆಗೆ ಸಂಬಂಧಿತ ಅಧಿಕಾರಿಗಳು ಗಮನಹರಿಸದ್ದರಿಂದ ಪಟ್ಟಣ ಪಂಚಾಯಿತಿ ಸದಸ್ಯರಾದ ಯಲ್ಲಾರಿ ಹುಬ್ಳಿಕರ ಅವರು ನಾಲ್ಕು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಾರ್ವಜನಿಕ ಶೌಚಗೃಹ (ಮೂತ್ರಿ) ನಿರ್ಮಾಣ ಹಾಗೂ ಸ್ವಚ್ಛತೆ ಕಾರ್ಯ ಕೈಗೊಳ್ಳಲು ಆದೇಶ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನ ಇಲ್ಲದಂತಾಗಿದೆ. ಅನಿವಾರ್ಯತೆಯಿಂದ ಜನರು ಮಾತ್ರ ಸಿಕ್ಕ ಸಿಕ್ಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವಂತಾಗಿದೆ.