

ಬೆಳಗಾವಿ: ಪ್ಯಾರಾ ಸ್ವಿಮ್ಮಿಂಗ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಬೆಳಗಾವಿ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ 8ನೇ ತರಗತಿಯ ಪ್ರಜ್ವಲ್ ಹನುಮನಟ್ಟಿ ವಿದ್ಯಾರ್ಥಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೋಮವಾರ ಅಭಿನಂದಿಸಿ, ಶುಭ ಕೋರಿದರು.
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ಯಾರಾ ಸ್ವಿಮಿಂಗ್ ಚಾಂಪಿಯನ್‌ಷಿಪ್‌ನ ವಿವಿಧ ಪ್ರಿ ಸ್ಟೈಲ್ ಹಾಗೂ ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ, ಒಟ್ಟು 6 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾನೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಕೆ ಕೊಪ್ಪದ ಈ ವಿದ್ಯಾರ್ಥಿಯು ಭಾಗಶಃ ಅಂಧನಾಗಿದ್ದರೂ ಛಲ ಬಿಡದೆ ಸತತ ಪ್ರಯತ್ನ, ಶಿಕ್ಷಕರ ಮಾರ್ಗದರ್ಶನದ ಫಲವಾಗಿ 6 ಚಿನ್ನದ ಪದಕಗಳನ್ನು ಪಡೆದಿದ್ದಾನೆ. ಈತನ ಸಾಧನೆಯ ಬಗ್ಗೆ ಮಾಹಿತಿ ಪಡೆದ ಸಚಿವರು, ವಿದ್ಯಾರ್ಥಿಗೆ ಅಭಿನಂದಿಸಿ, ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು. ಜತೆಗೆ ಅಗತ್ಯ ನೆರವು ನೀಡುವ ಭರವಸೆ ನೀಡಿದರು. ಈ ವೇಳೆ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ ಸು ಮಾದಿಗರ, ಮುಖ್ಯ ಶಿಕ್ಷಕಿ ಅನಿತಾ ಗಾವಡೆ, ಸಂಗೀತ ಶಿಕ್ಷಕಿ ಸ್ಮಿತಾ ಮಿಟಗಾರ ಇತರರಿದ್ದರು.