

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಾಟೀಲ ಪುಟ್ಟಪ್ಪನವರು ಆರಂಭಿಸಿದ ಪ್ರಪಂಚ ಪತ್ರಿಕೆ ಓದುಗರ ಜ್ಞಾನ, ಪ್ರಪಂಚದಷ್ಟೇ ವಿಸ್ತಾರವಾಗಬೇಕು. ಪಾಪು ಅವರು ನಮ್ಮೆಲ್ಲರ ವ್ಯಕ್ತಿತ್ವ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಶಿವಶಂಕರ ಹಿರೇಮಠ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ರಾ.ಹ. ದೇಶಪಾಂಡೆ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಜನ್ಮದಿನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವಪ್ರಭು ಹೊಸಕೇರಿ ಮಾತನಾಡಿ, ಪಾಪು ನೇರ, ನಿಷ್ಠುರ ಕನ್ನಡದ ಅಭಿಮಾನಿ. ಜೀವನದುದ್ದಕ್ಕೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಹೋರಾಡಿದರು. ಹು-ಧಾದಲ್ಲಿ ಪುಟ್ಟಪ್ಪನವರ ಹೆಸರಿನಿಂದ ಮುಖ್ಯ ಮಾರ್ಗಗಳು ಇಲ್ಲದಿರುವುದು ವಿಷಾದನೀಯ ಎಂದರು.
ಶಂಕರ ಹಲಗತ್ತಿ, ವಿ. ಎಸ್. ಮಾಳಿ, ಡಾ. ಬಾಳಣ್ಣ ಶೀಗಿಹಳ್ಳಿ ಮಾತನಾಡಿ, 3 ವರ್ಷಗಳಿಂದ ಪಾಟೀಲ ಪುಟ್ಟಪ್ಪನವರ ಹೆಸರಿನ ಟ್ರಸ್ಟ್ ರಚನೆಗೆ ಒತ್ತಾಯಿಸುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದು ವಿಷಾದನೀಯ. ನಾಡು, ನುಡಿಗೆ ತಮ್ಮ ಜೀವನ ಮುಡುಪಾಗಿಟ್ಟವರ ಹೆಸರಿನಲ್ಲಿ ಟ್ರಸ್ಟ್ ರಚನೆಯಾಗಬೇಕು. ಹಂಪಿ ವಿಶ್ವವಿದ್ಯಾಲಯಕ್ಕೆ ಪಾಪು ಕನ್ನಡ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿದರು. ಸತೀಶ ತುರಮರಿ, ವೀರಣ್ಣ ಒಡ್ಡೀನ, ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ, ನಿಂಗಣ್ಣ ಕುಂಟಿ, ಮಂಜುಳಾ ಹಾರೋಗೊಪ್ಪ, ಡಾ. ಲಿಂಗರಾಜ ಅಂಗಡಿ, ಶಂಕರಲಿಂಗ ಶಿವಳ್ಳಿ, ಎಸ್.ಜಿ. ಪಾಟೀಲ, ಮಹಾಂತೇಶ ನರೇಗಲ್ಲ, ಡಾ. ಚಿದಾನಂದ ಮನಸೂರ, ಶ್ರೀಶೈಲಗೌಡ ಕಮತರ, ಭೂಷಣ ಹಿರೇಮಠ, ಇತರರು ಇದ್ದರು.