ಪಾಪು ಅಭಿಮಾನಿಗಳ ಬಳಗದ ತಂಡ ಕಣಕ್ಕೆ

7 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ಮೇ 25ರಂದು ನಡೆಯಲಿದ್ದು, ಪಾಪು ಅಭಿಮಾನಿ ಬಳಗದ ತಂಡ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ವಿಧಾನ ಪರಿಷತ್​ ಮಾಜಿ ಸದಸ್ಯ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮೋಹನ ಲಿಂಬಿಕಾಯಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಟೀಲ ಪುಟ್ಟಪ್ಪ ಅಧಿಕಾರಾವಧಿ ಬಳಿಕ ಸಂಘದ ಅಭಿವೃದ್ಧಿ ಹೇಳಿಕೊಳ್ಳುವಷ್ಟು ಆಗಿಲ್ಲ. ಸರ್ಕಾರದಿಂದ ವಿಶೇಷ ಅನುದಾನ ತರುವಲ್ಲೂ ವಿಫಲವಾಗಿದೆ. ಹೀಗಾಗಿ ಸಂಘವನ್ನು ಮತ್ತೆ ಸದೃಢಗೊಳಿಸಲು, ಪಾಟೀಲ ಪುಟ್ಟಪ್ಪ ಆಶಯದಂತೆ ಕಾರ್ಯ ನಿರ್ವಹಿಸಲು ನಮ್ಮ ತಂಡ ಚುನಾವಣೆ ಕಣಕ್ಕಿಳಿದಿದೆ ಎಂದರು.

ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ರಾಜಕೀಯೇತರ ಹಾಗೂ ಜಾತ್ಯತಿತವಾಗಿ ಚುನಾವಣೆ ನಡೆಸುತ್ತೇವೆ. ಇಷ್ಟು ವರ್ಷ ಸೇವೆ ಸಲ್ಲಿಸಿರುವ ಚಂದ್ರಕಾಂತ ಬೆಲ್ಲದ ವಿಶ್ರಾಂತಿ ಪಡೆಯುವ ಮೂಲಕ ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡಲಿ ಎಂದು ಮನವಿ ಮಾಡಿದ ಲಿಂಬಿಕಾಯಿ, ಸಂಘವನ್ನು ಆರ್ಥಿಕವಾಗಿ ಸಬಲಗೊಳಿಸುವುದೇ ನಮ್ಮ ಉದ್ದೇಶ ಎಂದರು.

ಸಂಘಕ್ಕೆ ಹೊಸ ಚೈತನ್ಯ, ಹೊಸ ಕಾಯಕಲ್ಪ ನೀಡುವ ಕೆಲಸದ ಜತೆಗೆ ಸಂಘದ ಹೋರಾಟದ ಕಿಚ್ಚನ್ನು ಹೆಚ್ಚಿಸುವ, ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಆರ್ಥಿಕವಾಗಿ ಬಲಿಷ್ಠಗೊಳಿಸುವ ಕೆಲಸ ಮಾಡುತ್ತೇವೆ ಎಂದರು.

ಪ್ರಕಾಶ ಉಡಿಕೇರಿ ಮಾತನಾಡಿ, ಪಾಟೀಲ ಪುಟ್ಟಪ್ಪ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತರುತ್ತಿದ್ದರು. ಈಗ ಆ ಕೆಲಸ ನಡೆಯುತ್ತಿಲ್ಲ. ಚುನಾವಣೆ ಘೋಷಣೆ ಬಳಿಕ ಸಂಘದಲ್ಲಿ ಯಾವುದೇ ಕಾರ್ಯಕ್ರಮ ನಡೆಯಬಾರದು. ಆದರೆ ನಿತ್ಯ, ನಿರಂತರ ನಡೆಯುತ್ತಿವೆ. ಚುನಾವಣಾಧಿಕಾರಿಗಳು ಪಾರದರ್ಶಕವಾಗಿ ಚುನಾವಣೆ ನಡೆಸಲಿ ಎಂದು ಮನವಿ ಮಾಡಿದರು.

ಪಾಪು ಅಭಿಮಾನಿ ಬಳಗದಿಂದ ಅಧ್ಯಕ್ಷರಾಗಿ ಮೋಹನ ಲಿಂಬಿಕಾಯಿ, ಉಪಾಧ್ಯಕ್ಷರಾಗಿ ಡಾ. ಶರಣಪ್ಪ ಕೊಟಗಿ, ಕಾರ್ಯಾಧ್ಯಕ್ಷರಾಗಿ ಮನೋಜ ಪಾಟೀಲ, ಕೋಶಾಧ್ಯಕ್ಷರಾಗಿ ವೀರಣ್ಣ ಯಳಲ್ಲಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ ಉಡಿಕೇರಿ, ಸಹ ಕಾರ್ಯದರ್ಶಿಯಾಗಿ ಮಾರ್ತಾಂಡಪ್ಪ ಕತ್ತಿ, ಕಾರ್ಯಕಾರಿ ಸಮಿತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಮೀಸಲಾತಿಯಲ್ಲಿ ಡಾ. ವಿಶ್ವನಾಥ ಚಿಂತಾಮಣಿ, ಮಹಿಳಾ ಮೀಸಲಾತಿಯಲ್ಲಿ ರತ್ನಾ ಐರಸಂಗ, ಸಾಮಾನ್ಯ ವರ್ಗದಲ್ಲಿ ವಿಶ್ವನಾಥ ಅಮರಶೆಟ್ಟಿ, ಪ್ರೊ. ಹರ್ಷ ಡಂಬಳ, ಪ್ರಭು ಹಂಚಿನಾಳ, ದಾನಪ್ಪಗೌಡರ ಎಸ್​.ಎಂ., ಪ್ರಭು ಕುಂದರಗಿ, ಸಂತೋಷ ಪಟ್ಟಣಶೆಟ್ಟಿ ಹಾಗೂ ಆನಂದ ಏಣಗಿ ಸ್ಪರ್ಧಿಸಲಿದ್ದಾರೆ.

ಡಾ. ಶರಣಪ್ಪ ಕೊಟಗಿ, ಮನೋಜ ಪಾಟೀಲ, ಮಾರ್ತಾಂಡಪ್ಪ ಕತ್ತಿ, ರತ್ನಾ ಐರಸಂಗ, ಪ್ರೊ. ಹರ್ಷ ಡಂಬಳ, ಪ್ರಭು ಹಂಚಿನಾಳ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net