Pape Gowda was successful in integrated farming

Pape Gowda was successful in integrated farming
Published on

ಚಂದ್ರಶೇಖರ ಎಲ್. ಹೊಳೆನರಸೀಪುರ

ಸಮಗ್ರ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡಿರುವ ರೈತ ಪಾಪೇಗೌಡ ಆದಾಯದಲ್ಲಿ ದುಪ್ಪಟ್ಟು ಮಾಡಿಕೊಂಡು ಸಮುದಾಯದ ರೈತರಿಗೆ ಮಾದರಿಯಾಗಿದ್ದಾರೆ.

ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ದೊಡ್ಡಕಾಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಗೌಡನಹಳ್ಳಿ ಗ್ರಾಮದ ರೈತ ಪಾಪೇಗೌಡ ಕೃಷಿ ಕುಟುಂಬದಿಂದ ಬಂದು ಸಮಗ್ರ ಕೃಷಿ ಪದ್ಧತಿಯನ್ನು ಬೇಸಾಯದಲ್ಲಿ ಅಳವಡಿಸಿಕೊಂಡು ಮುನ್ನಡೆದಿದ್ದಾರೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ ಒಳಗೊಂಡಂತೆ ಮಿಶ್ರ ಬೇಸಾಯ ಪದ್ಧತಿಯಿಂದ ಬದುಕು ಕಟ್ಟಿಕೊಂಡು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಪಾಪೇಗೌಡರ ಪತ್ನಿ ಸುಶೀಲಮ್ಮ ಹಾಗೂ ಇಬ್ಬರು ಮಕ್ಕಳು ಸಹಕಾರ ನೀಡಿದ್ದಾರೆ. ತಂದೆಯ ಪಿತ್ರಾರ್ಜಿತ 8 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ಸು ಸಾಧಿಸುತ್ತಿದ್ದಾರೆ. ಜಮೀನಿನಲ್ಲಿ ರೇಷ್ಮೆ, ಬಾಳೆ, ತೆಂಗು, ಅಡಕೆ, ಶುಂಠಿ, ಪಪ್ಪಾಯ, ಸೀಬೆ, ದಾಳಿಂಬೆ, ಸೀತಾಫಲ, ಮಾವು, ಹಲಸು, ಏಲಕ್ಕಿ ನಿಂಬೆ ಬೆಳೆಸಿರುವುದಲ್ಲದೆ ತೋಟದ ಸುತ್ತ ತೇಗ, ಸಿಲ್ವರ್, ಹೆಬ್ಬೇವು ಮರಗಳನ್ನು ಬೆಳೆಸುತ್ತಿದ್ದಾರೆ. ಅಲ್ಲದೆ ಮುಸುಕಿನ ಜೋಳ, ರಾಗಿ, ಹುರುಳಿ, ಎಳ್ಳು, ಅಲಸಂದೆ ಬೆಳೆಗಳನ್ನು ಕಾಲಕ್ಕನುಗುಣವಾಗಿ ಬೆಳೆಯುತ್ತಿದ್ದಾರೆ. 2 ಎಕರೆಯಲ್ಲಿ ಅಡಕೆ, 2 ಎಕರೆ ತೆಂಗು, 3 ಎಕರೆ ರೇಷ್ಮೆ, 60 ಗುಂಟೆಯಲ್ಲಿ ಶುಂಠಿ, 1 ಎಕರೆ ಗೆಣಸು ಬೇಸಾಯ ಮಾಡಿದ್ದಾರೆ.

ರೇಷ್ಮೆ ಕೃಷಿ ಪದ್ಧತಿಯು ಪಾಪೇಗೌಡರ ಕೈ ಹಿಡಿದಿದೆ. ಸುಮಾರು 50 ವರ್ಷಗಳಿಂದ ರೇಷ್ಮೆ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಕೂಡ ರೇಷ್ಮೆ ಬೆಳೆಯಲ್ಲಿ ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಜಮೀನಿನಲ್ಲಿ ಹಂತ ಹಂತವಾಗಿ ರೇಷ್ಮೆ ಗಿಡವನ್ನು ಬೆಳೆದು ವರ್ಷಪೂರ್ತಿ ಆದಾಯ ಗಳಿಸುತ್ತಿದ್ದಾರೆ. ಬೆಳೆಗಳಿಗೆ ನೀರು ಪೂರೈಕೆಗಾಗಿ ಕೊಳವೆಬಾವಿ, ತೆರೆದ ಬಾವಿ ಅವಲಂಬಿಸಿದ್ದಾರೆ. ಸಾವಯವ ಗೊಬ್ಬರ, ಎರೆಹುಳು ಗೊಬ್ಬರವನ್ನು ತೋಟದಲ್ಲಿ ಶೇಖರಿಸಿ ಬೆಳೆಗಳಿಗೆ ಪೂರೈಕೆ ಮಾಡುತ್ತಾರೆ. ರಾಸುಗಳ ಗೊಬ್ಬರ, ತೋಟದ ಹಸಿ ತ್ಯಾಜ್ಯಗಳನ್ನು ಒಂದು ಗುಂಡಿಯಲ್ಲಿ ತುಂಬಿ ಸಾವಯವ ಗೊಬ್ಬರ ತಯಾರಿಸುತ್ತಿದ್ದಾರೆ. ಈ ಮಾದರಿಯ ಗೊಬ್ಬರ ಬಳಕೆ ಮಾಡುವುದರಿಂದ ಉತ್ತಮ ಫಸಲು ಬರುತ್ತಿದೆ.

ಇಳಿವಯಸ್ಸಿನಲ್ಲೂ ಕಡಿಮೆಯಾಗದ ಉತ್ಸಾಹ: ಗ್ರಾಮೀಣ ಜನರ ಮೂಲ ಕಸುಬು ಕೃಷಿ. ಅನುಭವದ ಮೂಲಕ ದುಂದು ವೆಚ್ಚ ಮಾಡದೆ ಶ್ರದ್ಧೆಯಿಂದ ಕೃಷಿಯಲ್ಲಿ ತೊಡಗಿಸಿಕೊಂಡರೆ ಯಶಸ್ಸು ಕಾಣಬಹುದು ಎನ್ನುವುದಕ್ಕೆ ಪಾಪೇಗೌಡರೇ ನಿದರ್ಶನರಾಗಿದ್ದಾರೆ. ಕೃಷಿ, ರೇಷ್ಮೆ, ಪಶು, ತೋಟಗಾರಿಕೆ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಇಲಾಖೆಯ ಅಧಿಕಾರಿಗಳಿಂದ ಕಾಲಕಾಲಕ್ಕೆ ಬೆಳೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡು ಬೆಳೆಯಲ್ಲಿ ನಷ್ಟವಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

ಅಡಕೆ, ತೆಂಗು, ಶುಂಠಿ, ರೇಷ್ಮೆ, ಹೈನುಗಾರಿಕೆ, ಹುರುಳಿ, ರಾಗಿ ಇತರ ಬೆಳೆಗಳಿಂದ ವಾರ್ಷಿಕ 8 ಲಕ್ಷ ರೂ.ವರೆಗೆ ಆದಾಯ ಗಳಿಸುತ್ತಿದ್ದಾರೆ.

ಸಮಗ್ರ ಕೃಷಿಯಲ್ಲಿ ಪಾಪೇಗೌಡರ ಅವಿಸ್ಮರಣೀಯ ಸೇವೆ ಸ್ಮರಿಸಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ, ಕೃಷಿ ಇಲಾಖೆ, ರೇಷ್ಮೆ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳು ಪ್ರಶಸ್ತಿಯನ್ನು ನೀಡಿ ಗೌರವಿಸಿವೆ. ತಾಲೂಕಿನ ಅನೇಕ ರೈತರು ಪಾಪೇಗೌಡರಿಂದ ರೇಷ್ಮೆ ಸಾಕಣೆ ವಿಷಯವಾಗಿ ಮಾಹಿತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net