ಪಪ್ಪಾಯಿ, ಪ್ಯಾಶನ್ ಫ್ರೂಟ್ ವೈವಿಧ್ಯತೆ ಪ್ರದರ್ಶನ

Papaya, passion fruit diversity showcase
Published on

ಮಡಿಕೇರಿ:

ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಹೆಚ್ಚಿನ ಸಂಶೋಧನೆಗಳಿಗೆ ಅನುವು ಮಾಡಿಕೊಡಲಾಗುವುದು ಎಂದು ಬೆಂಗಳೂರು ಐಐಎಚ್‌ಆರ್ ಹಣ್ಣಿನ ಬೆಳೆಗಳ ವಿಭಾಗದ ಮುಖ್ಯಸ್ಥ ಡಾ. ಶಂಕರನ್ ಹೇಳಿದರು. ಐಸಿಎಆರ್, ಐಐಎಚ್‌ಆರ್ ಹಾಗೂ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವತಿಯಿಂದ ಚೆಟ್ಟಳ್ಳಿಯಲ್ಲಿ ಬುಧವಾರ ಆಯೋಜಿಸದ್ದ ಪ್ಯಾಶನ್ ಫ್ರೂಟ್ ಮತ್ತು ಪಪ್ಪಾಯ ಹಣ್ಣಿನ ವೈವಿಧ್ಯತೆಯ ಪ್ರದರ್ಶನ ಹಾಗೂ ಚರ್ಚೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶಿಷ್ಟ ರುಚಿಯ ಕೊಡಗಿನ ಕಿತ್ತಳೆ ಬಗ್ಗೆ ಸಂಶೋಧನೆಗೋಸ್ಕರ ಸ್ವಾತಂತ್ರö್ಯ ಪೂರ್ವದಲ್ಲಿ ಆರಂಭವಾದ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಬದಲಾದ ಕಾಲಮಾನಕ್ಕೆ ಅನುಗುಣವಾಗಿ ವೈವಿಧ್ಯತೆಯನ್ನು ರೂಢಿಸಿಕೊಳ್ಳುತ್ತಿದ್ದು ರೈತರನ್ನು ಶಶಕ್ತೀಕರಣಗೊಳಿಸುವ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿದೆ. ವಿದೇಶಿ ಹಣ್ಣುಗಳ ಬಗ್ಗೆ ಸಂಶೋಧನೆ ನಡೆಸುವ ದೇಶದ ಏಕೈಕ ಕೇಂದ್ರ ಇದಾಗಿದೆ. ಕೊಡಗಿನಲ್ಲಿ ತೋಟಗಾರಿಕೆ ಬೆಳೆಗಳ ವಿಸ್ತರಣೆಗೆ ಸಾಕಷ್ಟು ಅವಕಾಶಗಳಿದ್ದು, ಕಾಫಿ ಬೆಳೆಗಾರರು ಕಾಫಿ ಮತ್ತು ಕರಿಮೆಣಸು ಮೇಲೆ ಮಾತ್ರ ಅವಲಂಭಿತರಾಗದೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಹಣ್ಣಿನ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬಹುದು ಎಂದರು.

ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾದ ಕೂರ್ಗ್ ಹನಿ ಡ್ಯೂ ಪಪ್ಪಾಯಿ ಮತ್ತು ಕಾವೇರಿ ಪ್ಯಾಶನ್ ಫ್ರೂಟ್‌ಗೆ ಜಿಐ ಟ್ಯಾಗ್ ಮಾಡಿಸಿ ಇದನ್ನು ಪೇಟೆಂಟ್‌ಗೆ ನೋಂದಾಯಿಸಲು ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮಾಜಿ ಮುಖ್ಯಸ್ಥ ಡಾ. ವಿ.ವಿ. ಸುಳದ್ ಮಠ್ ಮಾತನಾಡಿ ಕೂರ್ಗ್ ಹನಿ ಡ್ಯೂ ಪಪ್ಪಾಯಿ ತಳಿಯನ್ನು ಚೆಟ್ಟಳ್ಳಿ ಕೇಂದ್ರದಲ್ಲಿ ೧೯೫೮ರಲ್ಲಿ ಡಾ. ನಂಜಪ್ಪ ಕಂಡುಹಿಡಿದರು. ವೈರಸ್ ರೋಗಬಾಧೆ ಅಷ್ಟಾಗಿ ತಗುಲದ ಈ ತಳಿಗೆ ಗುಜರಾತ್ ಮತ್ತು ರಾಜಸ್ತಾನದಲ್ಲಿ ಬೇಡಿಕೆ ಇದೆ. ಲಭ್ಯವಿರುವ ವಿವಿಧ ಪಪಾಯಿ ತಳಿಗಳನ್ನು ಒಟ್ಟು ಸೇರಿಸಿ ಉತ್ತಮ ತಳಿ ಆಯ್ಕೆ ಮಾಡಿಕೊಳ್ಳುವ ಅಗತ್ಯವಿದೆ. ತೋಟಗಾರಿಕೆ ಉತ್ಪನ್ನಗಳಿಂದ ರೈತರ ಆದಾಯ ಹೆಚ್ಚು ಮಾಡಬಹುದು. ಸಾಂಪ್ರದಾಯಿಕ ಬೆಳೆಗಳ ಬೆಲೆ ಕಡಿಮೆ ಆದಾಗ ಉಪ ಬೆಳೆಗಳು ಕೈ ಹಿಡಿಯುತ್ತದೆ. ಕಾವೇರಿ ಪ್ಯಾಶÀನ್ ಫ್ರೂಟ್‌ಗೆ ನಂ. ೧ ಸ್ಥಾನ ಇದೆ. ವರ್ಷಕ್ಕೆ ೨ ಬೆಳೆ ಬರುವ ಬೆಳೆ ಇದಾಗಿದ್ದು ನೇರಳೆ ಬಣ್ಣದ ಪ್ಯಾಶÀನ್ ಫ್ರೂಟ್ ಕೊಡಗಿನಂತಹ ಗುಡ್ಡಗಾಡು ಪ್ರದೇಶದಲ್ಲಿ ಉತ್ತಮವಾಗಿ ಬರುತ್ತದೆ ಎಂದು ಹೇಳಿದರು.

ಹಣ್ಣಿನ ಬೆಳೆಗಳ ವಿಜ್ಞಾನಿ ಡಾ. ವೈಟಿಎನ್ ರೆಡ್ಡಿ ಮಾತನಾಡಿ ವೈರಸ್ ಹಾವಳಿ ಪಪ್ಪಾಯಿ ಬೆಳೆಗೆ ಮಾರಕವಾಗಿದೆ. ಕೂರ್ಗ್ ಹನಿ ಡ್ಯೂಗೆ ಇದನ್ನು ತಡೆದುಕೊಳ್ಳುವ ಶಕ್ತಿ ಇದೆ. ಪಪ್ಪಾಯಿ ಬೆಳಗ್ಗಿನ ತಿಂಡಿ ರೀತಿ ಬಳಸುವುದು ಹೆಚ್ಚಾಗಿರುವುದರಿಂದ ಸಾಕಷ್ಟು ಬೇಡಿಕೆ ಇದೆ. ಆದರೆ ಆ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿಲ್ಲ ಎಂದರು.

ಪ್ರಗತಿಪರ ಕೃಷಿಕ ಬಾರಿತ್ತಾಯ ಪಿ. ರವಿಶಂಕರ್ ಮಾತನಾಡಿ, ನಮ್ಮ ತೋಟದಲ್ಲಿ ೧೯೭೦ ರಿಂದ ಪ್ಯಾಶನ್ ಫ್ರೂಟ್ ಬೆಳೆಯಲಾಗುತ್ತಿದೆ. ಕೊಡಗಿನ ಮಣ್ಣಿನಲ್ಲಿ ಏನು ಎಸೆದರೂ ಬೆಳೆಯುತ್ತದೆ. ಅಂತಹ ಭೂಮಿ ಇದು. ನವೆಂಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ಉತ್ತಮ ಪ್ಯಾಷನ್ ಫ್ರೂಟ್ ಸಿಗುತ್ತದೆ. ತರಕಾರಿ ರೀತಿ ಬಳಸಬಹುದಾದ ಪ್ಯಾಷನ್ ಫ್ರೂಟ್ ಕೂಡ ಇದೆ. ತಮ್ಮ ತೋಟದಲ್ಲಿ ಬೆಳೆಯುವ ಶೇ. ೧೦ರಷ್ಟು ಹಣ್ಣುಗಳು ಪ್ರಾಣಿ, ಪಕ್ಷಿಗಳಿಗೆ ಮೀಸಲು ಎಂದ ಅವರು, ಭತ್ತ ಬೆಳೆಯುವುದರಲ್ಲಿ ಯಾವುದೇ ಲಾಭ ಇಲ್ಲ. ಆದರೂ ತಮ್ಮಲ್ಲಿ ಪ್ರಧಾನವಾಗಿ ಭತ್ತ ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.
ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥ ಡಾ. ಎಸ್. ರಾಜೀಂದರನ್, ಕೃಷಿ ವಿಜ್ಞಾನಿ ಡಾ. ರಾಣಿ, ಹಣ್ಣು ವಿಜ್ಞಾನಿ ಡಾ. ನಯನ್ ದೀಪಕ್ ಜಿ., ಕೇಂದ್ರದ ವಿಜ್ಞಾನಿ ಮುರಳೀಧರ್, ಪ್ರಗತಿಪರ ಕೃಷಿಕ ಬೋಸ್ ಮಂದಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net