

ಚಿಕ್ಕಬಳ್ಳಾಪುರ: ಕಾಲಜ್ಞಾನಿ ತಪೋಭೂಮಿ ಇಲ್ಲಿನ ಪಾಪಾಗ್ನಿ ಮಠದಲ್ಲಿ ಶ್ರೀ ಶರಭಯೋಗೇಂದ್ರಸ್ವಾಮಿಯ ೩೦೭ ನೇ ಆರಾಧನಾ ಮಹೋತ್ಸವವು ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ದಕ್ಷಿಣಕಾಶಿ ಪಂಚನಂದಿ ಮಹಾಪುಣ್ಯ ಕ್ಷೇತ್ರ, ಪಾಪಾಗ್ನಿ ಮಠ ಚಾರಿಟಬಲ್ ಟ್ರಸ್ಟ್, ವಿಶ್ವಕರ್ಮ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮದ ಅಂಗವಾಗಿ ಭಕ್ತ ಸಮೂಹದ ನಡುವೆ ಧಾರ್ಮಿಕ ವಿವಿಧ ಆಚರಣೆಗಳನ್ನು ಕೈಗೊಳ್ಳಲಾಯಿತು.
ಇಲ್ಲಿನ ಕಾಶಿ ವಿಶ್ವನಾಥ ಸ್ವಾಮಿ ಶಿವಲಿಂಗ, ಅನ್ನಪೂರ್ಣದೇವಿ, ಶ್ರೀ ಶರಭಯೋಗೇಂದ್ರ ಸ್ವಾಮಿ ರುದ್ರಲಿಂಗ ಸೇರಿದಂತೆ ವಿವಿಧ ದೇವರುಗಳಿಗೆ ಬಗೆಬಗೆಯ ಹೂವುಗಳಿಂದ ಆಕರ್ಷಕ ಅಲಂಕಾರ ಮಾಡಲಾಗಿತ್ತು. ಮುಂಜಾವದಲ್ಲಿ ನಾದಸ್ವರ, ಸುಪ್ರಭಾತದೊಂದಿಗೆ ಚಾಲನೆ ಪಡೆದುಕೊಂಡು ದ್ವಾರಪೂಜೆ, ಧ್ವಜಾರೋಹಣ, ಲಿಂಗಪ್ರತಿಷ್ಠಾಪನೆ, ಗಣಪತಿ ಪೂಜೆ, ಕಲ್ಯಾಣಿಯಿಂದ ಕಲಶೋತ್ಸವ, ನವಗ್ರಹ, ದುರ್ಗಾ, ಮೃತ್ಯಂಜಯ ಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳಿಂದ ತಪೋ ಭೂಮಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತು.
ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಆಂಧ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ದೇವರ ದರ್ಶನ ಪಡೆದರು. ಭಕ್ತ ಸಮೂಹಕ್ಕಾಗಿ ಅನ್ನ ಸಂತರ್ಪಣೆಯನ್ನು ಕೈಗೊಳ್ಳಲಾಗಿತ್ತು.
ಇಲ್ಲಿನ ಪಾಪಾಗ್ನಿ ನದಿ ತೀರದಲ್ಲಿ ಗುರು ಪರಂಪರೆಯ ಮಠವು ಸ್ಥಾಪನೆಯಾಗಿದ್ದು ಶ್ರೀ ವೀರಬೋಜಾಚಾರ್ಯ ಸ್ವಾಮಿಗಳ ಜೀವ ಸಮಾಧಿಯಾಗಿದ್ದಾರೆ. ಕಾಲಜ್ಞಾನಿ ಶ್ರೀಮದ್ ವೀರಾಟ್ ಪೋತಲೂರಿ ವೀರಬ್ರಹ್ಮೇಂದ್ರ ಸ್ವಾಮಿಗಳು ಇಲ್ಲಿ ೧೪ ವರ್ಷ ವಯಸ್ಸಿನವರೆಗೂ ಕಾಲವನ್ನು ಕಳೆದಿದ್ದು ಕಾಲಜ್ಞಾನ ಬೋಧನೆಯ ಮೂಲಕ ಮಹಾ ಗುರುವಾಗಿ ಗಮನ ಸೆಳೆದಿದ್ದಾರೆ. ಇಂತಹ ನೆಲದಲ್ಲಿ ಕಳೆದ ೩ ಶತಮಾನದಿಂದಲೂ ಆರಾಧನಾ ಮಹೋತ್ಸವ ಕೈಗೊಂಡು ಬರಲಾಗುತ್ತಿದೆ. ಅದರಂತೆ ಆಷಾಡ ಬಹುಳ ಅಷ್ಟಮಿ ಶುಕ್ರವಾರದಂದು ೩೦೭ ನೇ ಮಹೋತ್ಸವ ಹಾಗೂ ರಥೋತ್ಸವ ನಡೆಯಿತು.
ಕಾರ್ಯಕ್ರಮದ ನೇತೃತ್ವವನ್ನು ಪಾಪಾಗ್ನಿ ಮಠ ಟ್ರಸ್ಟ್ ಅಧ್ಯಕ್ಷ ಎನ್.ಹೆಂಜಾರಾಚಾರಿ, ಉಪಾಧ್ಯಕ್ಷರಾದ ಎ.ಬಿ.ಮಂಜುನಾಥಚಾರಿ, ವಿ.ಸುಬ್ರಮಣ್ಯಾಚಾರಿ, ಕಾರ್ಯದರ್ಶಿ ಸಿ.ಬಿ.ನಂಜುಂಡಾಚಾರಿ, ಖಜಾಂಚಿ ಎಚ್.ಆನಂದಚಾರಿ ಮತ್ತಿತರರು ವಹಿಸಿದ್ದರು.