

ಮಳವಳ್ಳಿ: ತಾಲೂಕಿನ ಬೋಪ್ಪೇಗೌಡನಪುರ (ಬಿಜಿಪುರ) ಮಂಟೇಸ್ವಾಮಿ ಮಠದಲ್ಲಿ ಶುಕ್ರವಾರ ಟಿ.ನರಸೀಪುರ ತಾಲೂಕಿನ ಡಣಾಯಕನಪುರ ಗ್ರಾಮದ ಎರಡನೇ ಪಂಕ್ತಿ ಸೇವೆ ಜರುಗಿತು.
ಯುಗಾದಿ ಮರುದಿನದಿಂದ ಶ್ರೀ ಮಠದ ವತಿಯಿಂದ ಪಾರಂಪರಿಕವಾಗಿ ಐದು ಪಂಕ್ತಿ ಸೇವೆ ಪದ್ಧ್ದತಿಗಳು ನಡೆಯಲಿದ್ದು, ಕಳೆದ ಸೋಮವಾರ ಮೊದಲನೇ ಪಂಕ್ತಿ ಸೇವೆ ನಡೆದಿತ್ತು. ಶುಕ್ರವಾರ ಎರಡನೇ ಪಂಕ್ತಿ ಸೇವೆಯ ಅಂಗವಾಗಿ ನೂರಾರು ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಸ್ವಾಮಿಗೆ ಹರಕೆ ಹೊತ್ತ ಭಕ್ತರು ಮಂಟೇಸ್ವಾಮಿ ಮಠಕ್ಕೆ ಆಗಮಿಸಿ ಕಜ್ಜಾಯ-ತುಪ್ಪ ಹಾಗೂ ಸಕ್ಕರೆ-ಬಾಳೆ ಹಣ್ಣು ಸೇವೆಯ ಜತೆಗೆ ಪೂಜೆ ಸಲ್ಲಿಸಿ ಮಂಟೇಸ್ವಾಮಿ ಗದ್ದುಗೆ ದರ್ಶನ ಪಡೆದರು. ಶ್ರೀ ಮಠದ ಪೀಠಾಧಿಕಾರಿ ಶ್ರೀ ಜ್ಞಾನನಂದ ಚನ್ನರಾಜೇ ಅರಸು ಅವರು ಪಂಕ್ತಿ ಸೇವೆಗೆ ಸಿದ್ಧ್ದಪಡಿಸಿದ್ದ ಅನ್ನದ ರಾಶಿಗೆ ಪೂಜೆ ನೆರವೇರಿಸಿ, ಭಕ್ತ ಸಮೂಹದ ಪಂಕ್ತಿಗೆ ಉಣ ಬಡಿಸಲು ಚಾಲನೆ ನೀಡಿದರು. ನೆರೆದ ಭಕ್ತಗಣ ಭಕ್ತಿಯಿಂದ ನಮಿಸಿ ಪ್ರಸಾದ ಸೇವನೆ ಮಾಡಿದ ನಂತರ ಸ್ವಲ್ಪ ಅನ್ನವನ್ನು ಪ್ರಸಾದವೆಂದು ಎತ್ತಿಟ್ಟುಕೊಂಡು ತೆರಳಿದರು.