ಹೋರಾಟಗಾರರಿಂದ ಪಂಜಿನ ಮೆರವಣಿಗೆ

CPTN 1
ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ವಿರೋಧಿಸಿ ಹೋರಾಟಗಾರರು ಪಂಚಿನ ಮೆರವಣಿಗೆ ನಡೆಸಿದರು. ರೈತ ಹೋರಾಟಗಾರ ನಲ್ಲಪ್ಪನಹಳ್ಳಿ ನಂಜಪ್ಪ, ವೆಂಕಟರಮಣಪ್ಪ, ಮೋಹನ್ ಕುಮಾರ್, ಸಿ.ಕೆ.ರಾಮಚಂದ್ರಪ್ಪ, ಮುಕುಂದ್, ಲಕ್ಷ್ಮಮ್ಮ, ವೆಂಕಟೇಶ್, ನಲ್ಲೂರು ಗೋಪಿನಾಥ್ ಮತ್ತಿತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಹೋಬಳಿಯ 13 ಗ್ರಾಮಗಳ 1777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಗೊಳ್ಳಿಸುತ್ತಿರುವುದನ್ನು ವಿರೋಧಿಸಿ ಹೋರಾಟಗಾರರು ಪಂಜಿನ ಮೆರವಣಿಗೆ ನಡೆಸಿದರು.
858 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಸರ್ಕಾರವೂ ಹ್ಯಾಡಾಳ ಮತ್ತು ಗೋಖರೆ ಬಚ್ಚಹಳ್ಳಿ ಗ್ರಾಮದ ಕೃಷಿ ಭೂಮಿಯನ್ನು ನೋಟಿಫಿಕೇಶನ್ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು ಪಂಚಿನ ಮೆರವಣಿಗೆ ಮೂಲಕ ಇದನ್ನು ಪ್ರತಿಭಟಿಸಿದರು.
ಸುದೀರ್ಘ ಹೋರಾಟದ ಬಗ್ಗೆ ಗಮನ ನೀಡದ ಸರ್ಕಾರದ ನೀತಿಯಿಂದ ರೈತರ ತಾಳ್ಮೆಯ ಕಟ್ಟೆಯೊಡೆದರೆ ಮುಂದೆ ಏನಾಗುತ್ತದೆ ಎಂಬುದನ್ನು ತೋರಿಸುತ್ತೇವೆ ಈ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತು ಭೂ ಸ್ವಾಧೀನಗೊಂಡಿರುವ ಭೂಮಿಯನ್ನು ಕೈಬಿಡಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.
ಬೆಳೆ ಬೆಳೆಯುವ ರೈತನ ಕೈಯಲ್ಲಿರಬೇಕು: ಸರ್ಕಾರಗಳು ರೈತರ ತಾಳ್ಮೆ ಪರೀಕ್ಷೆ ಮಾಡುತ್ತಿವೆ. ಸ್ವಾತಂತ್ರ್ಯ ಪಡೆದು 75 ವರ್ಷ ಕಳೆದರೂ ರೈತರನ್ನು ಅರ್ಥ ಮಾಡಿಕೊಳ್ಳುವಂತಹ ಸರ್ಕಾರಗಳು ಬರಲಿಲ್ಲ. ಭೂಮಿ ಎನ್ನವುದು ಬೆಳೆ ಬೆಳೆಯುವ ರೈತನ ಕೈಯಲ್ಲಿರಬೇಕೆ ಹೊರತು, ಕಾರ್ಖಾನೆಗಳ ಮಾಲೀಕರ ಕೈಯಲ್ಲಲ್ಲ. ಸರ್ಕಾರಕ್ಕೆ ಬದ್ಧತೆಯಿದ್ದರೆ, ರೈತರ ಭೂಮಿಯನ್ನು ಕೈಬಿಟ್ಟು, ಬರಡು ಭೂಮಿಗಳಲ್ಲಿ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿಕೊಳ್ಳಿ, ನಾವು ನಿರಂತರವಾಗಿ ರೈತರ ಹೋರಾಟದ ಒಂದು ಭಾಗವಾಗುತ್ತೇವೆ ಎಂದು
ಹೋರಾಟ ಸಮಿತಿ ಸದಸ್ಯ ನಲ್ಲೂರು ಗೋಪಿನಾಥ್ ಆಗ್ರಹಿಸಿದರು.

ಎಲ್ಲೆಲ್ಲಿ ಹೋರಾಟಗಳು ಬಲಿಷ್ಟವಾಗಿವೆಯೋ ಅಲ್ಲೆಲ್ಲಾ ಜಯಸಿಕ್ಕಿದೆ. ರೈತರ ಹೋರಾಟದಲ್ಲಿ ಶಕ್ತಿಯಿದೆ. ರೈತ ವಿರೋಧಿ ನೀತಿಗಳನ್ನು ಅನುಸರಿಸುವ ಯಾವುದೇ ಸರ್ಕಾರಗಳನ್ನು ಬದಲಾಯಿಸುವ ಶಕ್ತಿ ಹೋರಾಟಗಳಿಗೆ ಇದೆ ಎಂದು ಹೋರಾಟ ಸಮಿತಿ ನಲ್ಲಪ್ಪನಹಳ್ಳಿ ನಂಜಪ್ಪ ಹೇಳಿದರು. ಸರ್ಕಾರ, ಭೂಸ್ವಾಧೀನ ಪ್ರಕ್ರಿಯೆ ಆದೇಶ ಹಿಂಪಡೆಯಲೇಬೇಕು. ಕೃಷಿ ಜಮೀನುಗಳು ರೈತರಿಂದ ಕಿತ್ತುಕೊಂಡು ಕಾರ್ಪೋರೇಟ್ ಕಂಪನಿಗಳಿಗೆ ಮತ್ತು ದಳ್ಳಾಲಿಗಳಿಗೆ ಕೊಡುವುದಕ್ಕೆ ಬಿಡಬಾರದು. ಭೂಮಿ ಮಾರಾಟಕ್ಕಿದೆ ಎಂದರೆ ರಾತ್ರಿಯಲ್ಲೂ ನೋಂದಣಿ ಮಾಡುತ್ತಾರೆ. ರಾಜ್ಯ ಸರ್ಕಾರಕ್ಕೆ ಒಂದು ತಿಂಗಳು ಗಡುವು ಕೊಟ್ಟಿದ್ದೇವೆ ಎಂದರು. ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ದೇಶದಲ್ಲಿ ಏನಾದರೂ ಪಡೆದುಕೊಳ್ಳಬೇಕಾದರೆ, ಹೋರಾಟದ ಮೂಲಕವೇ ಪಡೆಯಬೇಕು. ಬ್ರಿಟೀಷರು ಮಾಡಿರುವ ಕಾನೂನುಗಳನ್ನೆ ಅನುಸರಿಸುತ್ತಿದ್ದೇವೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನು ಬದಲಾಗಬೇಕು. ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸುವಂತಾದರೆ ಹೋರಾಟಕ್ಕೆ ಖಂಡಿತ ಯಶಸ್ಸು ಸಿಗುತ್ತದೆ ಎಂದರು. ದೇಶದಲ್ಲಿ ನ್ಯಾಯ ಪಡೆಯಬೇಕಾದರೆ, ಹೋರಾಟಗಳ ಮೂಲಕವೇ ಸಾಧ್ಯವಾಗುತ್ತದೆ. ಯಾವುದೇ ಸರ್ಕಾರಗಳು ರೈತರ ತಂಟೆಗೆ ಬಂದರೆ ಸುಮ್ಮನಿರಲು ಸಾಧ್ಯವಿಲ್ಲ. ಹೂ, ಹಣ್ಣು, ತರಕಾರಿಗಳನ್ನು ಬೆಳೆಯುವ ಭೂಮಿಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ಕೊಡಲು ಬಿಡುವುದಿಲ್ಲ ಎಂದು ರೈತ ಪರ ಹೋರಾಟಗಾರ ಚಿಮಾಚನಹಳ್ಳಿ ಮುಕುಂದ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net