ಯುಪಿಯಲ್ಲಿ ದಲಿತರ ಹತ್ಯೆ ಖಂಡಿಸಿ ಪಂಜಿನ ಮೆರವಣಿಗೆ

IMG-20241005-WA0046
ತಿ.ನರಸೀಪುರ ಪಟ್ಟಣದಲ್ಲಿ ಶನಿವಾರ ರಾತ್ರಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು. ಆಲಗೂಡು ಶಿವಕುಮಾರ್, ಯಾಚೇನಹಳ್ಳಿ ಸೋಮಶೇಖರ್, ಕುಕ್ಕೂರು ರಾಜು, ರಜನಿ, ಸೋಮಣ್ಣ, ಶಿವಯ್ಯ, ಹೊನ್ನಯ್ಯ, ನಾಗರಾಜು ಇದ್ದರು.
Published on

ತಿ.ನರಸೀಪುರ: ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯ ಭವಾನಿ ನಗರದಲ್ಲಿ ದಲಿತ ಕುಟುಂಬದ ನಾಲ್ವರನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾಗೂ ಮುಖಂಡರು ಪಟ್ಟಣದಲ್ಲಿ ಶನಿವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.


ಪಂಜುಗಳನ್ನು ಹಿಡಿದು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ದಲಿತರಿಗೆ ರಕ್ಷಣೆ ನೀಡಲಾಗದ ಸರ್ಕಾರಗಳ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತ ಕಾಲೇಜು ರಸ್ತೆಯ ಮಾರ್ಗವಾಗಿ ತಾಲೂಕು ಆಡಳಿತ ಸೌಧ ಮುಂಭಾಗದ ಅಂಬೇಡ್ಕರ್ ಪ್ರತಿಮೆವರೆಗೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿದರು.


ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ದಲಿತರಲ್ಲದೆ, ದುರ್ಬಲ ವರ್ಗದ ಬಡವರು ಹಾಗೂ ಮಹಿಳೆಯರ ಮೇಲೆ ನಿರಂತರವಾಗಿ ಹಲ್ಲೆ, ಕೊಲೆ-ಸುಲಿಗೆ, ಅತ್ಯಾಚಾರ, ದೌರ್ಜನ್ಯದಂಥ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ಅದರಲ್ಲಿಯೂ ಉತ್ತರ ಪ್ರದೇಶದಲ್ಲಿ ನಿತ್ಯ ಒಂದಲ್ಲ ಒಂದು ಕಾರಣಗಳಿಗಾಗಿ ದಲಿತರ ಹತ್ಯೆಗಳು ನಡೆಯುತ್ತಿದ್ದರೂ ಅಲ್ಲಿನ ಆಡಳಿತಾರೂಢ ಸರ್ಕಾರ ದಲಿತರ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಒಂದೇ ಕುಟುಂಬದ ನಾಲ್ವರು ದಲಿತರ ಭೀಕರ ಕೊಲೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಕೃತ್ಯವೆಸಗಿರುವ ಕೊಲೆಗಡುಕರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ದೇಶಾದ್ಯಂತ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.


ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್ ಮಾತನಾಡಿ, ದಲಿತರನ್ನು ಕೊಲೆ ಮಾಡುವ ದುರುಳರಿಗೆ ಕಠಿಣ ಶಿಕ್ಷೆ ಜಾರಿಗೊಳಿಸಬೇಕು. ಮೃತರ ಕುಟುಂಬಗಳಿಗೆ ಸರ್ಕಾರಿ ನೌಕರಿ ಕಡ್ಡಾಯಗೊಳಿಸಬೇಕು. ಮೃತರ ಪರಿಹಾರವನ್ನು ದುಪ್ಪಟ್ಟು ಮಾಡಬೇಕು ಎಂದು ಆಗ್ರಹಿಸಿದರು.


ದಸಂಸ ತಾಲೂಕು ಸಂಚಾಲಕ ಕುಕ್ಕೂರು ರಾಜು, ಸಂಘಟನಾ ಸಂಚಾಲಕರಾದ ಕಿರಗಸೂರು ರಜನಿ, ಹಿರಿಯೂರು ಸೋಮಣ್ಣ, ಯಡದೊರೆ ನಾರಾಯಣ್, ಶಿವರಾಜು. ಸುಜ್ಜುಲೂರು ಶಿವಯ್ಯ, ಬನ್ನಹಳ್ಳಿಹುಂಡಿ ಉಮೇಶ್, ಆಲಗೂಡು ನಾಗರಾಜ್ ಮೂರ್ತಿ, ಮುಖಂಡರಾದ ಸೋಸಲೆ ಶಿವಣ್ಣ, ರವಿ, ಅರುಣ್ ಪ್ರಸಾದ್, ಸಂಜಯ್, ಆನಂದ, ಉಕ್ಕಲಗೆರೆ ರಾಜು, ಕುರುಬೂರು ನಾರಾಯಣ್, ಇಂಡವಾಳು ಹೊನ್ನಯ್ಯ, ನಾಗರಾಜು, ಕೇತುಪುರ ಶಿವನಂಜ, ಡಣಾಯಕನಪುರ ವಸಂತ, ವಾಟಾಳ್ ಸಿದ್ದೇಶ್, ಪ್ರಭು, ಮನು, ಮಾದೇಶ, ಮುತ್ತತ್ತಿ ನಾಗರಾಜು, ದಾವಣಗೆರೆ ಕಾಲನಿ ರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net