

ಮಡಿಕೇರಿ: ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಸೋಮವಾರಪೇಟೆ ತಾಲೂಕಿನ ಮಾದಾಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಶನಿವಾರ ಸಂಜೆ ಪಂಜಿನ ಮೆರವಣಿಗೆ ನಡೆಯಿತು.
ಮಾದಾಪುರದ ಚಾಮುಂಡಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಪಂಜಿನ ಮೆರವಣಿಗೆ ಮಾದಾಪುರದ ಮುಖ್ಯ ಬೀದಿಗಳಲ್ಲಿ ಸಾಗಿತು. ನಂತರ ಮಾದಾಫುರ ಶ್ರಿ ಗಣಪತಿ ದೇವಾಲಯಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು.
ಸಭಾ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಹಿಂದು ಜಾಗರಣಾ ವೇದಿಕೆಯ ಪ್ರಾಂತ ಪ್ರಮುಖ ಹರೀಶ್ ಶಕ್ತಿನಗರ್, ಅಖಂಡ ಭಾರತಕ್ಕಾಗಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯವನ್ನು ಅಂದಿನ ಕೆಲವರ ಸ್ವಾರ್ಥದಿಂದಾಗಿ ದೇಶ ವಿಭಜನೆ ಮಾಡುವ ಮೂಲಕ ಅಪಮೌಲ್ಯಗೊಳಿಸಲಾಯಿತು. ಅಂದು ನೂರಾರು ವರ್ಷಗಳ ಕಾಲ ನಡೆದ ಸ್ವಾತಂತ್ರ್ಯ ಹೋರಾಟವು ಈಗಿನ ನಮ್ಮ ನಕ್ಷೆಯಲ್ಲಿನ ಭಾರತಕ್ಕಾಗಿ ಆಗಿರಲಿಲ್ಲ. ಪಾಕಿಸ್ಥಾನ ಬಾಂಗ್ಲಾದೇಶಗಳನ್ನೊಳಗೊಂಡ ಭೂಪ್ರದೇಶವೂ ಭಾರತದ ಭೂಭಾಗಗಳೇ ಆಗಿದ್ದವು. ಅಂದಿನ ಮಹಮ್ಮದಾಲಿ ಜಿನ್ನಾ, ನೆಹರು ಸೇರಿದಂತೆ ಕೆಲವರ ತಪ್ಪು ನಿರ್ಧಾರಗಳು ದೇಶವನ್ನೇ ಮತೀಯ ಆಧಾರದಲ್ಲಿ ಚೂರು ಚೂರು ಮಾಡಿತು ಎಂದು ಅಕ್ರೋಶ ಹೊರಹಾಕಿದರು.
ಅಂದು ಮತೀಯ ಆಧಾರದಲ್ಲಿ ದೇಶ ವಿಭಜನೆ ಮಾಡಿದವರು ಇಂದು ತಮ್ಮ ಹೊಟ್ಟೆಪಾಡಿನ ರಾಜಕೀಯಕ್ಕಾಗಿ ಜಾತ್ಯಾತೀತತೆಯ ಮಂತ್ರ ಜಪಿಸುತ್ತಾ ನಾವೆಲ್ಲರೂ ಒಂದೇ ಎನ್ನುತ್ತಿರುವುದು ಸ್ವಾತಂತ್ರ್ಯ ಭಾರತದ ದುರಂತವೇ ಆಗಿದೆಯೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಯೋಧ, ಹವಾಲ್ದಾರ್ ತಂಬುಕುತ್ತಿರ ಗಪ್ಪು ಸೋಮಯ್ಯ ಮಾತನಾಡಿ, ಈ ದೇಶದ ಗಡಿಗಳನ್ನು ಹಗಲಿರುಳು ಸೈನಿಕರು ಕಾಯುತ್ತಿದ್ದು ಇದರಿಂದಾಗಿ ನಮ್ಮ ಸುತ್ತಲಿನ ಶತ್ರುದೇಶಗಳ ಉಪಟಳಗಳನ್ನು ದಿಟ್ಟವಾಗಿ ಎದುರಿಸಿ ದೇಶದೊಳಗೆ ಸುರಕ್ಷಿತವಾಗಿದ್ದೇವೆ. ಅದೇ ರೀತಿ ದೇಶದೊಳಗಿನ ಮತಾಂಧರ ಭಯೋತ್ಪಾಧನೆ-ಸಂಘರ್ಷಗಳನ್ನು ಎದುರಿಸಲು ಯಾವುದೇ ಹೋರಾಟಗಳಿಗೂ ಯುವ ಸಮೂಹ ಸದಾ ಸಿದ್ಧರಾಗಬೇಕೆಂದರು.
ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಮಿತಿಯ ಪ್ರಮುಖರಾದ ರಾಜೀವ್, ತಾಲೂಕು ಸಂಯೋಜಕ ವಿನು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರ್.ಎಸ್.ಎಸ್. ನ ಜಿಲ್ಲಾ ಕಾರ್ಯವಾಹರಾದ ದೇವಪ್ಪಂಡ ಡಾಲಿ, ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್, ಸಹ ಸಂಯೋಜಕ ಚೇತನ್, ಮಂಜುನಾಥ್, ಜಿಲ್ಲಾ ಸಮಿತಿಯ ಸುಭಾಶ್ ತಿಮ್ಮಯ್ಯ, ಕುಮಾರ್, ಉಮೇಶ್, ವಿನಯ್, ಸುನಿಲ್, ಶಾಂತೆಯಂಡ ತಿಮ್ಮಯ್ಯ ಸೇರಿದಂತೆ ನೂರಾರು ಕಾರ್ಯಕರ್ತರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿರಂತರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ನೂರಾರು ದೇಶಭಕ್ತರು, ಮಹಿಳೆಯರು, ಮಕ್ಕಳು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸುಭಾಸ್ ತಿಮ್ಮಯ್ಯ ವಂದೇ ಮಾತರಂ ಹಾಡಿದರು. ಪೋಲೀಸರು ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್ ಒದಗಿಸಿದ್ದರು.