

ಔರಾದ್: ಅಳಿವಿನ ಅಂಚಿನಲ್ಲಿರುವ ಚಿಪ್ಪು ಹಂದಿ (ಪ್ಯಾಂಗೋಲಿನ್)ಯೊಂದು ಗಂಗನಬೀಡಿ ಗ್ರಾಮ ಹೊರವಲಯದ ಜಮೀನಿನಲ್ಲಿ ಶನಿವಾರ ಪತ್ತೆಯಾಗಿದ್ದು, ರೈತರು ಮತ್ತು ಅರಣ್ಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಗಂಗನಬೀಡಿ ಜಮೀನಿನಲ್ಲಿ ಅಳವಡಿಸಿದ್ದ ಬೇಲಿಗೆ ಸಿಲುಕಿದ್ದನ್ನು ಗಮನಿಸಿದ ಮಾರುತಿ ಮಚಕುರಿ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಚಿಪ್ಪು ಹಂದಿಯನ್ನು ರಕ್ಷಿಸಿ ಅರಣ್ಯದಲ್ಲಿ ಬಿಡಲಾಗಿದೆ ಎಂದು ಪ್ರಭಾರಿ ವಲಯ ಅರಣ್ಯಾಧಿಕಾರಿ ಅಂಕುಶ ಮಚಕುರಿ ತಿಳಿಸಿದ್ದಾರೆ. ಚಂದ್ರಕಾAತ, ಉತ್ತಮ್, ರಘುನ್ನಾಥ ರಾಠೋಡ್ ಇತರರಿದ್ದರು.
ಚಿಪ್ಪು ಹಂದಿ ಸಸ್ತನಿ ಜಾತಿಗೆ ಸೇರಿದ್ದು, ಆಂಗ್ಲದಲ್ಲಿ ಪ್ಯಾಂಗೋಲಿನ್ ಎನ್ನುತ್ತಾರೆ. ೩೦ರಿಂದ ೧೦೦ ಸೆಂಮೀ ಗಾತ್ರ ಇರುತ್ತದೆ. ಸಾಮಾನ್ಯವಾಗಿ ಉಷ್ಣವಲಯದ ದೇಶಗಳಾದ ಆಫ್ರಿಕಾ ಏಷ್ಯಾದಲ್ಲಿ ಕಂಡು ಬರುತ್ತದೆ. ಚರ್ಮದ ಮೇಲೆ ಅಗಲ ಚಿಪ್ಪುಗಳಿರುತ್ತವೆ. ಮರದ ಪೊರೆ, ಮಣ್ಣಿನಲ್ಲಿ ವಾಸಿಸುತ್ತವೆ. ಇರುವೆ, ಗೆದ್ದಲು ತಿನ್ನುತ್ತವೆ. ಏಕಕಾಲಕ್ಕೆ ೧ರಿಂದ ೩ ಮರಿಗಳಿಗೆ ಜನ್ಮ ನೀಡುತ್ತವೆ. ಇದರ ಮೇಲೆ ದಾಳಿ ಮಾಡಿದಾಗ ಚೆಂಡಿನ ಆಕಾರ ತಾಳಿ ರಕ್ಷಣೆ ಮಾಡಿಕೊಳ್ಳುತ್ತದೆ ಎಂದು ಅಂಕುಶ ಮಚಕುರಿ ತಿಳಿಸಿದ್ದಾರೆ.