

ಆನಂದ ಭಮ್ಮನ್ನವರ ಚಿಕ್ಕೋಡಿ
ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ಜನ-ಜಾನುವಾರುಗಳು ತೊಂದರೆ ಅನುಭವಿಸುತ್ತಿರುವ ಸಂದರ್ಭದಲ್ಲೇ ಸನ್ ಸ್ಟೋಕ್ ಹಾಗೂ ನೀರಿನ ಪ್ರಮಾಣ ಕಡಿಮೆಯಾಗಿ ನದಿ-ಕೆರೆಗಳಲ್ಲಿ ಇರುವ ಮೀನುಗಳು ಸಾವನಪ್ಪುತ್ತಿದ್ದು, ಇದು ಮೀನು ಕೃಷಿ ಮಾಡುವವರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ.
ಜಿಲ್ಲೆಯಲ್ಲಿ ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಕಳೆದ ಹತ್ತು ದಿನಗಳಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಬಿಸಿಲಿನ ತಾಪಮಾನ 40, 41 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಗರಿಷ್ಠ ತಾಪಮಾನವಾಗಿದೆ. ತಾಪಮಾನ ಹೆಚ್ಚಾದ ಹಿನ್ನೆಲೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಯ ಪಾಂಗೇರಿ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಕೆರೆಯಲ್ಲಿದ್ದ ಮೀನುಗಳ ಸಾಯುತ್ತಿವೆ. ಇದು ಮೀನು ಕೃಷಿಕರಿಗೆ ಆರ್ಥಿಕ ತೊಂದರೆ ಉಂಟು ಮಾಡಿದೆ.
7.5 ಲಕ್ಷ ರೂ. ಖರ್ಚು: ಪಾಂಗೇರಿ ಕೆರೆಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಸಚಿನ ಸಂಕಪಾಳ ಅವರು ಟೆಂಡರ್ ಪಡೆದು 2.5 ಲಕ್ಷ ಮೀನುಗಳ ಸಾಕಾಣಿಕೆ ಮಾಡಲಾಗುತ್ತಿದೆ. ಈ ಕೆರೆಯಲ್ಲಿ ಮೀನು ಕೃಷಿ ಮಾಡಲು 5 ವರ್ಷಗಳ ಅವಧಿಗಾಗಿ ಗುತ್ತಿಗೆ ನೀಡಲಾಗಿದೆ. ಆದರೆ ಗುತ್ತಿಗೆ ಪಡೆದ ಮೀನು ಕೃಷಿಕ 10 ತಿಂಗಳು ಸಾಕಿದ್ದ ಮೀನುಗಳು ಮೃತಪಟ್ಟಿವೆ.ಈಗಾಗಲೇ ಇವುಗಳಿಗೆ 7.5 ಲಕ್ಷ ರೂ. ಖರ್ಚು ಮಾಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 222 ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಲಾಗುತ್ತಿದೆ. ನಿಪ್ಪಾಣಿಯ ಪಾಂಗೇರಿ ಕೆರೆಯು ಸಂಪೂರ್ಣ ಮಳೆಯಾಶ್ರಿತ ಕೆರೆಯಾಗಿದ್ದು, ಮಳೆ ಸುರಿದರೆ ಮಾತ್ರ ಕೆರೆಗೆ ಜೀವ ಕಳೆ ಬರುತ್ತದೆ. ಇನ್ನು ಮೇ ತಿಂಗಳಿನಲ್ಲಿ ಬಿಸಿಲಿನ ಪ್ರಕರತೆ ಹೆಚ್ಚಾಗುವ ಲಕ್ಷಣವಿದ್ದು, ಕೆರೆಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದು ಮೀನುಗಳ ಸಾವಿಗೆ ಕಾರಣವಾಗುತ್ತಿದೆ.
ನಿಪ್ಪಾಣಿಯ ಪಾಂಗೇರಿ ಕೆರೆಯಲ್ಲಿ ಈಗಿರುವ ನೀರಿನ ಪ್ರಮಾಣಕ್ಕೆ 1.5 ಲಕ್ಷ ಮಾತ್ರ ಮೀನು ಸಾಕಬಹುದು. ಬಿಸಿಲಿನ ತಾಪಮಾನಕ್ಕೆ ಕೆರೆಯಲ್ಲಿ ನೀರು ಕಡಿಮೆಯಾಗಿ ಮೀನುಗಳ ಸಾವಿಗಿಡಾಗುತ್ತಿವೆ. ನೀರು ಕಡಿಮೆಯಾಗಿ ಮೀನುಗಳ ಸಾಂದ್ರತೆ ಹೆಚ್ಚಾದ ಹಿನ್ನಲೆ ಮೀನುಗಳ ಸಾವು ಸಂಭವಿಸಿವೆ. ಮೀನುಗಳ ಸಂಖ್ಯೆ ಕಡಿಮೆ ಮಾಡುವಂತೆ ಸೂಚಿಸಲಾಗಿದೆ. ರಂಗನಾಥ ಶಿಂಧೆ, ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ ಚಿಕ್ಕೋಡಿ ಕೆರೆಯಲ್ಲಿ ಮೀನುಗಾರಿಕೆ ಇಲಾಖೆಯಿಂದ ವರ್ಷಕೆ 2.5 ಲಕ್ಷ ರೂ. ನೀಡಿ ಟೆಂಡರ್ ಪಡೆದು ಮೀನು ಕೃಷಿ ಮಾಡುತ್ತಿದ್ದೇವೆ. ಹತ್ತು ತಿಂಗಳು ಸಾಕಿದ ಮೀನುಗಳು ಬಿಸಿಲಿನ ತಾಪಮಾನಕ್ಕೆ ಕೆರೆಯಲ್ಲಿ ನೀರು ಕಡಿಮೆಯಾಗಿ ನಿತ್ಯ 400-500 ಮೀನುಗಳು ಸಾಯುತ್ತಿವೆ. ಇದರಿಂದ ಅಪಾರ ನಷ್ಟ ಉಂಟಾಗುತ್ತಿದೆ. ಸಚಿನ ಸಂಕ್ಪಾಳ, ಮೀನು ಕೃಷಿಕ