

ಚನ್ನಗಿರಿ: ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ಶುಕ್ರವಾರ ಭಾವಸಾರ ಕ್ಷತ್ರಿಯ ದೈವ ಮಂಡಳಿ, ಭಜನಾ ಮಂಡಳಿ ಮತ್ತು ಮಹಿಳಾ ಭಜನಾ ಮಂಡಳಿ ಸಮುದಾಯದವರಿಂದ 5 ನೇ ವರ್ಷದ ದಿಂಡಿ ಮಹೋತ್ಸವ ನಡೆಯಿತು.
ಉತ್ಸವದ ನಿಮಿತ್ತ ತಾಲೂಕಿನ ವಿಠ್ಠಲ ರುಕುಮಾಯಿ ಮಂದಿರದಲ್ಲಿ ಮೂರು ದಿನ ಭಜನೆ, ಅಖಂಡ ವೀಣಾ ಜಾಗರಣೆ, ಕೀರ್ತನೆಗಳು ನಡೆದವು. ಕೀರ್ತನಾಕಾರರಾದ ಬಂಕಾಪುರದ ಶ್ರೀಭಾನುದಾಸ್ ಮಹಾರಾಜ್ ಸರ್ವದೆ ಅವರ ತಂಡದಿಂದ ಕಾಕಡಾರತಿ, ಪಾರಾಯಣ, ನಾಮಜಪ, ಪ್ರವಚನ ಮತ್ತು ಕೊನೆಯ ದಿನದಂದು ಬೆಳ್ಳಿ ರಥದಲ್ಲಿ ಪಾಂಡುರಂಗ ಮೂರ್ತಿಯ ಅದ್ದೂರಿ ಮೆರವಣಿಗೆ ನಡೆಯಿತು. ಚನ್ನಗಿರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹೊಳೆಹೊನ್ನೂರು, ಭದ್ರಾವತಿ, ಹೊಳೆಲ್ಕೆರೆ, ನಲ್ಲೂರಿನ ಸಮುದಾಯದವರು ಭಾಗವಹಿಸಿದ್ದರು.
ಹರಿಭಕ್ತ ಪರಾಯಣ ಬಂಕಾಪುರದ ಶ್ರೀಭಾನುದಾಸ್ ಮಹಾರಾಜ್ ಸರ್ವದೆ ಮಾತನಾಡಿ, ನಮ್ಮಲ್ಲಿನ ಸ್ವಾರ್ಥ, ನಾನು ಎನ್ನುವ ಅಹಂಕಾರವನ್ನು ದೂರಮಾಡಿದಾಗ ದೇವರು ನಮ್ಮ ಬಳಿಗೆ ಓಡಿ ಬರುತ್ತಾನೆ ಎಂದರು.
ಅನ್ನ ಸಂತರ್ಪಣೆ ನೆರವೇರಿತು. ಭಾವಸಾರ ಕ್ಷತ್ರಿಯ ದೈವ ಮಂಡಳಿ ಹಾಗೂ ಮಹಿಳಾ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.