

ಉಪ್ಪಿನಬೆಟಗೇರಿ: ಶ್ರಾವಣ ವದ್ಯ ಗೋಕುಲಾಷ್ಟಮಿ ಅಂಗವಾಗಿ ಗ್ರಾಮದ ರೇಣುಕಾ ಎಲ್ಲಮ್ಮ ದೇವಸ್ಥಾನದಲ್ಲಿ ಶುಕ್ರವಾರ ಪಾಂಡುರಂಗ ರುಕ್ಮಿಣಿ ಪಲ್ಲಕ್ಕಿ ಮಹೋತ್ಸವ ಮಂಗಲಗೊಂಡಿತು.
ಸೆ. 6ರಂದು ಪೋತಿ ಸ್ಥಾಪನೆ, ಭಜನೆ, ಪ್ರವಚನ, ರಾತ್ರಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಖಂಡ ನಾಮಸ್ಮರಣೆಯೊಂದಿಗೆ ಮೂರ್ತಿಯ ತೊಟ್ಟಿಲೋತ್ಸವ ಜರುಗಿತು.
ಗುರುವಾರ ಬೆಳಗ್ಗೆ ಕಾಕಡಾ ಭಜನೆ ನಂತರ ಸಂತ ಶ್ರೇಷ್ಠ ಜ್ಞಾನೇಶ್ವರ ಮಹಾರಾಜರ ಗ್ರಂಥ ಪಾರಾಯಣ ಮತ್ತು ಸಂತರಾದ ದೇವಪ್ಪ ಓಲೇಕಾರ, ಶಿವಾನಂದ ಕಡತಾಳ ಅವರಿಂದ ಪ್ರವಚನ ನಡೆಯಿತು.
ಶುಕ್ರವಾರ ಗ್ರಾಮದ ರೇಣುಕಾ ಎಲ್ಲಮ್ಮ ದೇವಸ್ಥಾನದಿಂದ ಹನುಮನಕೊಪ್ಪ, ಉಪ್ಪಿನಬೆಟಗೇರಿಯ ಪ್ರಮುಖ ಬೀದಿಗಳಲ್ಲಿ ದಿಂಡಿ ಹಾಗೂ ಪಲ್ಲಕ್ಕಿ ಉತ್ಸವ ಜರುಗಿತು. ಸಕಲ ವಾದ್ಯ ವೃಂದ ಮೇಳ ಹಾಗೂ ಸುಮಂಗಲೆಯರು ಆರತಿ ತಟ್ಟೆ ಹಿಡಿದು ಪಲ್ಲಕ್ಕಿ ಉತ್ಸವಕ್ಕೆ ಮೆರುಗು ತಂದರು.
ಸಂತರಾದ ಜ್ಞಾನೇಶ್ವರ ಮೊರಕಾರ, ಮೋಹನ ಬಡಿಗೇರ, ದೇವಪ್ಪ ಓಲೇಕಾರ, ಶಿವಾನಂದ ಕಡತಾಳ ಮಡಿವಾಳಪ್ಪ ರೇಷ್ಮಿ, ರವಳಪ್ಪ ಶಿನಗಾರಿ, ಬಸವರಾಜ ಕುಸುಬಿ, ಹರ್ಷ ಯಲಿಗಾರ, ವಿರೂಪಾಕ್ಷಪ್ಪ ಗುಡ್ಡದಮನಿ ಹಾಗೂ ಸೋಪಾನ ಲೋಲಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.