

ನವೆಂಬರ್ 1 ರಂದು ಕಾರ್ತಿಕ ಶುದ್ಧ ಏಕಾದಶಿ ಇರುವುದರಿಂದ ಶ್ರೀ ಪಾಂಡುರಂಗ ರುಕ್ಮಿಣಿ ದೇವರ ದರ್ಶನ ಪಡೆಯಲು, ಶ್ರೀ ಬೊಗಳೇರಹಟ್ಟಿ ತಿಪ್ಪಾರೆಡ್ಡಿ ಗುರುಗಳ ಸಾರಥ್ಯದಲ್ಲಿ ಇತ್ತೀಚೆಗೆ ಕಾಗಳಗೆರೆ ಗ್ರಾಮದಿಂದ ಪಾದಯಾತ್ರೆ ಪ್ರಾರಂಭಗೊಂಡಿತು.
ಪಾದಯಾತ್ರೆಯ ಉದ್ದೇಶ ಮತ್ತು ಮಾರ್ಗ
"ಕಾಲ್ನಡಿಗೆ ಮೂಲಕ ಕಬ್ಬಳಕ್ಕೆ ಹೋಗಿ ನಾವೆಲ್ಲ ಶ್ರೀ ಪಾಂಡುರಂಗಸ್ವಾಮಿ ದರ್ಶನ ಪಡೆದು ಭಜನೆ, ಕೀರ್ತನೆ ಜತೆಗೆ ಎಲ್ಲ ಸೇವೆಗಳನ್ನು ನಡೆಸಲಾಗುವುದು" ಎಂದು ಶ್ರೀ ಬೊಗಳೇರಹಟ್ಟಿ ತಿಪ್ಪಾರೆಡ್ಡಿ ಅವರು ತಿಳಿಸಿದರು.
ಈ ಪಾದಯಾತ್ರೆಯು ಕಾಗಳಗೆರೆ, ಸಿರಿಗೆರೆ, ಚಿಕ್ಕೇನಹಳ್ಳಿ, ಕೋಣನೂರು, ಬೊಮ್ಮೇನಹಳ್ಳಿ, ಭೀಮಸಮುದ್ರ, ತಾಳ್ಯ, ಹಾಲುರಾಮೇಶ್ವರ, ಕೆಲ್ಲೋಡು ಮಾರ್ಗವಾಗಿ ಸಾಗಿ ಅಂತಿಮವಾಗಿ ಶ್ರೀ ಕ್ಷೇತ್ರ ಬೆಲಗೂರು ಕಬ್ಬಳ ತಲುಪಲಿದೆ.
ಅನ್ನದಾಸೋಹದ ವ್ಯವಸ್ಥೆ
ಪಾದಯಾತ್ರೆಯ ಮಾರ್ಗದುದ್ದಕ್ಕೂ ಆಯಾ ಭಾಗದ ಭಕ್ತ ಸಮಿತಿಯವರು ಊಟದ ವ್ಯವಸ್ಥೆಯನ್ನು ವಹಿಸಿಕೊಂಡಿದ್ದಾರೆ ಎಂದು ದಿಂಡಿ ಉಸ್ತುವಾರಿ ಡಿ.ಎಲ್. ತಿಪ್ಪೇಸ್ವಾಮಿ ತಿಳಿಸಿದರು. ಪಾದಯಾತ್ರೆಗೆ 50ಕ್ಕೂ ಹೆಚ್ಚು ಜನ ದೇಣಿಗೆಯನ್ನು, 30ಕ್ಕೂ ಹೆಚ್ಚು ಜನ ಅನ್ನದಾಸೋಹದ ವ್ಯವಸ್ಥೆಯನ್ನು ನೀಡಿದ್ದಾರೆ ಎಂದು ಸಿರಿಗೆರೆಯ ಮಧುಚಂದ್ರ ತಿಳಿಸಿದರು.
ಪಾದಯಾತ್ರೆಯಲ್ಲಿ ನಾಗರಾಜ್, ಪೂಜಾರಿ ಹನುಮಂತಪ್ಪ, ದಿಂಡಿ ಸಂಚಾಲಕರಾದ ಮಂಜುಳಾ ತಿಪ್ಪೇಶ್, ಸ್ಟುಡಿಯೋ ಶಿವಣ್ಣ ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಭಕ್ತರು ಪಾಲ್ಗೊಂಡಿದ್ದಾರೆ.