ಜಾತಿಗೆ ಸೀಮಿತಗೊಳಿಸಿ ಶರಣರಿಗೆ ಅಪಮಾನವೆಸಗದಿರಿ

chn july 20 pandomatti
Published on

ಚನ್ನಗಿರಿ: ಸಮ ಸಮಾಜವನ್ನು ಕಟ್ಟಲು ತನು-ಮನ ಸ್ವಾರ್ಥಗಳನ್ನು ಮರೆತು ಸೇವೆ ಮಾಡಿದ 12ನೇ ಶತಮಾನದ ಶರಣರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಶರಣರಿಗೆ ಮಾಡುವ ಅಪಮಾನವಾಗುತ್ತದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ. ಗುರುಬಸವ ಸ್ವಾಮೀಜಿ ತಿಳಿಸಿದರು.

ತಾಲೂಕು ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣನವರ ಸ್ಮರಣೋತ್ಸವ ಹಾಗೂ 873ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶರಣರು ತಮ್ಮ ಬಗ್ಗೆ ಯೋಚಿಸದೇ, ಸುತ್ತಲೂ ಇರುವ ಮನುಕುಲದ ಸುಖ, ಸಂತೋಷಕ್ಕಾಗಿ ದಿಟ್ಟ ನಿಲುವನ್ನು ಹೊಂದಿ, ಮಾನವೀಯತೆಯಿಂದ ಬರಿಗಾಲಿನಲ್ಲಿ ಭೂಮಂಡಲವನ್ನು ಸುತ್ತಿ ಬದುಕಿನ ಸಾರವನ್ನು ವಚನಗಳ ಮೂಲಕ ಬಿತ್ತರಿಸಿದರು. ಅಂತವರನ್ನು ನಾವು ಇಂದು ಒಂದು ಸಮಾಜಕ್ಕೆ ಸೀಮಿತ ಮಾಡಿದ್ದೇವೆ. ಇಂತಹ ಧೋರಣೆ ಸರಿಯಲ್ಲ. ಜಾತಿ- ಧರ್ಮ, ಭೇದ-ಭಾವ ಮರೆತು ಎಲ್ಲರೂ ಶರಣರ ಜಯಂತಿ ಆಚರಿಸಿದಾಗ ಮಾತ್ರ ಕಾರ್ಯಕ್ರಮಗಳು ಸಾರ್ಥಕತೆ ಪಡೆಯುತ್ತವೆ ಎಂದರು.

ಶ್ರಾವಣ ಮಾಸ ಪ್ರಾರಂಭವಾಗಲಿದೆ, ಪಾಂಡೋಮಟ್ಟಿ ವಿರಕ್ತಮಠದಿಂದ ತಾಲೂಕಿನಲ್ಲಿ ಒಟ್ಟು 15 ಗ್ರಾಮಗಳಲ್ಲಿ ಅನುಭಾವ ತಂತು ಕಾರ್ಯಕ್ರಮ ಮಾಡಲಾಗುತ್ತದೆ. ಪ್ರಥಮವಾಗಿ ಜುಲೈ 28 ರಂದು ಮೆದುಗೊಂಡನ ಗ್ರಾಮದಲ್ಲಿ ಆರಂಭವಾಗಿ ಆಗಸ್ಟ್ 17ಕ್ಕೆ ವಡ್ನಾಳ್ ಗ್ರಾಮದಲ್ಲಿ ಸಮಾರೋಪ ನಡೆಯಲಿದೆ ಎಂದರು.

ಜಿಲ್ಲಾಧಿಕಾರಿ ಡಾ. ಗಂಗಾಧರ ಸ್ವಾಮಿ ಮಾತನಾಡಿ, ವಿರಕ್ತಮಠದಲ್ಲಿ ಅನೇಕ ದಶಕಗಳಿಂದ ಶಿವಾನುಭವ ಗೋಷ್ಠಿ ನಡೆಸಿಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ. ಜನರಲ್ಲಿ ವೈಚಾರಿಕತೆ ಪ್ರಜ್ಞೆ ಮೂಡಿಸುವಲ್ಲಿ ಮಠದ ಶ್ರಮ ಸಾರ್ಥಕವಾಗಿದೆ. ಏಷ್ಯಾದಲ್ಲಿಯೇ ಎರಡನೇ ದೊಡ್ಡ ಕೆರೆ ಮತ್ತು ಇತಿಹಾಸ ಪ್ರಸಿದ್ಧ ಸೂಳೆಕೆರೆಯನ್ನು ಸುತ್ತಲಿನ ಜನರು ಒತ್ತುವರಿ ಮಾಡಿಕೊಂಡಿದ್ದರು. ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಒತ್ತುವರಿ ಮಾಡಿದ್ದ 128 ಎಕರೆಯನ್ನು ತೆರವುಗೊಳಿಸಲಾಗಿದೆ. ಉಳಿದ ಒತ್ತುವರಿಯನ್ನು ಸದ್ಯದಲ್ಲಿಯೇ ತೆರವುಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಕಡೂರು ಉಪನ್ಯಾಸಕ ಡಾ.ಜಿ.ಬಿ. ಮಂಜುನಾಥ್, ಡಾ. ಇಂಚರಾ, ಬೆಂಗಳೂರಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಸಮಿತಿ ಅಧ್ಯಕ್ಷ ಉಮೇಶ ಎಚ್.ಪಾಟೀಲ, ಬಿಲ್ಲಹಳ್ಳಿ ಬಸವರಾಜಪ್ಪ, ಸೋಮಲಾಪುರ ರುದ್ರಮುನಿ, ಕಾಕನೂರು ಕೆ.ಜಿ. ರೇಣು, ಧನಂಜಯ, ಎಂ.ಬಿ. ನಾಗರಾಜ್, ಶಿವಮೂರ್ತಪ್ಪ, ಟಿ.ವಿ. ಚಂದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net