

ಮೈಸೂರು: ಗದಗದ ಪಂಡಿತ್ ಶರಣಕುಮಾರ ಗುತ್ತರಗಿ ಅವರಿಗೆ 2025ನೇ ಸಾಲಿನ ಪಂಡಿತ್ ಕೆ.ಎಸ್.ಹಡಪದ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಯಿತು.
ದಿ.ಪಂಡಿತ್ ಕೆ.ಎಸ್.ಹಡಪದ ಅವರ 19ನೇ ಪುಣ್ಯಸ್ಮರಣಾರ್ಥ ನಗರದ ಶ್ರೀಗುರು ಪುಟ್ಟರಾಜ ಸಂಗೀತ ಸಭಾದಿಂದ ಭಾನುವಾರ ಕುವೆಂಪುನಗರ ಗಾನಭಾರತೀ ರಾಮಗೋವಿಂದ ಕಲಾವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಕುಸ್ತಿಪಟು ಮಲ್ಲಾಪುರದ ಶಂಕರ್ ಎಸ್.ಕಳಿಗೋನ್ನವರ್ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಹಡಪದ ಅವರು ಕಡು ಬಡತನ ಕುಟುಂಬದಿಂದ ಬಂದ ಪ್ರತಿಭೆ. ಇವರ ತಂದೆಯವರು ಕೂಡ ತಬಲ ವಾದಕರಾಗಿದ್ದರಿಂದ ಸಂಗೀತದ ಸೆಳೆತ ಉಂಟಾಗಿತ್ತು ಎಂದರು.
ಹಡಪದ ಅವರು ಅಪಾರ ಶಿಷ್ಯವೃಂದವನ್ನು ಹೊಂದಿದ್ದಾರೆ. ಆವರ ಬಳಿ ಕಲಿತ ಶಿಷ್ಯರು ಉತ್ತಮವಾದ ಸಾಧನೆ ಮಾಡಿದ್ದು, ರಾಜ್ಯದ ಎಲ್ಲೆಡೆ ಸಂಗೀತ ಪರಂಪರೆಯನ್ನು ಪಸರಿಸುತ್ತಿದ್ದಾರೆ ಎಂದು ಹೇಳಿದರು.
ಇಕ್ವೆಲೈಜ್ ಆರ್.ಸಿ.ಎಂ.ಪ್ರೈ.ಲಿಮಿಟೆಡ್ ಛೇರ‌್ಮನ್ ಭಾಸ್ಕರ್ ಕಳಲೆ ಮಾತನಾಡಿ, ಕಲೆಯನ್ನು ಎಷ್ಟು ಕಲಿತ್ತಿದ್ದರು ಆದನ್ನು ಕೇಳಿ ಆನಂದಿಸುವುದೇ ಸಂಭ್ರಮ. ಕಲೆ ಮತ್ತು ಸಾಹಿತ್ಯ ಪ್ರಸ್ತುತ ದಿನಗಳಲ್ಲಿ ಅಪಾರವಾದ ಮಹತ್ವವನ್ನು ಹೊಂದಿದೆ. ಸಂಗೀತದಲ್ಲಿ ನಾನಾ ವಿಶಿಷ್ಟವಾದ ಪರಂಪರೆಯನ್ನು ಹೊಂದಿದ್ದು, ಅವುಗಳನ್ನು ಕಲಿಯುವ ನಿರಂತರ ಪ್ರಯತ್ನ ಇರಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಎಸ್.ಜಿ.ಪಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಮನೋಲ್ಲಾಸ ಸಮೂಹ ತಬಲಾ ವಾದನ ಪ್ರೇಕ್ಷಕರನ್ನು ರಂಜಿಸಿತು. ಪ್ರಶಸ್ತಿ ಸ್ವೀಕರಿಸಿದ ಪಂ.ಶರಣಕುಮಾರ ಗುತ್ತರಗಿ ಗದಗ ಅವರಿಂದ ತಬಲ ವಾದನ ಗಮನ ಸೆಳೆಯಿತು. ಭೀಮಾಶಂಕರ ಬಿದನೂರ ಲೆಹರಾ ಸಹಕಾರ ನೀಡಿದರು.
ಎನ್‌ಐಇ ಕಾಲೇಜಿನ ಪ್ರಾಧ್ಯಾಪಕ ಡಾ.ಸಿ.ಕೆ.ಸಂಜಂ್ ಕುವಾರ್, ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ಅಧ್ಯಕ್ಷ ಭೀಮಾಶಂಕರ್ ಬಿದನೂರು, ಖಜಾಂಚಿ ಸುರೇಶ್ ಎಸ್. ಮಂಗಳೂರು ಇತರರು ಇದ್ದರು.