ಭಕ್ತಿ ಜಾಗೃತಿ ಮೂಡಿಸಿದ ಪಂ. ಪ್ರದ್ಯುಮ್ನಾಚಾರ್ಯರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶ್ಲಾಘನೆ

IMG_20240713_204203_49-1.jpg
Published on

ಹುಬ್ಬಳ್ಳಿ: ಬಡತನದಲ್ಲೂ ವಿದ್ಯಾಪೀಠ ವನ್ನು ನಡೆಸಿ ಹಲವರಿಗೆ ಅನ್ನದಾನ ಜ್ಞಾನ ದಾನ ಮಾಡುವದರ ಜತೆಗೆ ಸನಾತನ ಧರ್ಮ, ಭಕ್ತಿಯ ಜಾಗೃತಿ ಮೂಡಿಸಿದವರು ಮಹಾಚಾರ್ಯ ವಿದ್ಯಾಲಯದ ಪಂ. ಪ್ರದ್ಯುಮ್ನಾಚಾರ್ಯ ಜೋಶಿ ಅವರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಶನಿವಾರ ಏರ್ಪಡಿಸಿದ್ದ ಪಂ. ಪ್ರದ್ಯುಮ್ನಾಚಾರ್ಯರ ಷಷ್ಠಬ್ಧಿ ಸಮಾರಂಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

ದೇಶದಲ್ಲಿ ಧರ್ಮದ ಬಗ್ಗೆ ಜನರಲ್ಲಿ ಅರಿವು ಕಡಿಮೆಯಾದ ಸಂದರ್ಭದಲ್ಲೆಲ್ಲ ಆಚಾರ್ಯರು ಧರ್ಮ ಜಾಗೃತಿ ಕಾರ್ಯದಲ್ಲಿ ತೊಡಗುವ ಮೂಲಕ ಸನಾತನ ಧರ್ಮದ ಪುನರುತ್ಥಾನಕ್ಕೆ ಶ್ರಮಿಸುತ್ತ ಬಂದಿದ್ದಾರೆ. ಹಾಗೇ ಹುಬ್ಬಳ್ಳಿಯಲ್ಲಿ ಪಂ. ಪ್ರದ್ಯುಮ್ನಾಚಾರ್ಯರು ಧರ್ಮ ಕಾರ್ಯದ ಕೈಂಕರ್ಯ ತೆಗೆದುಕೊಂಡವರು. ಜನರನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವ ಕೆಲಸ ಮಾಡಿದವರು ಎಂದರು.

ಜ್ಞಾನ ಹಾಗೂ ಗುಣಕ್ಕೆ ಗೌರವ ಇದ್ದೇ ಇರುತ್ತದೆ ಎಂಬುದನ್ನು ಪುರಾಣ, ಇತಿಹಾಸಗಳು ಸಾರಿ ಹೇಳಿವೆ. ಅಂತಹ ಜ್ಞಾನ ಹಾಗೂ ಗುಣಗಳು ಆಚಾರ್ಯರಲ್ಲಿ ಸಮ್ಮಿಳಿತಗೊಂಡಿವೆ. ಕಷ್ಟದಲ್ಲೂ ವಿದ್ಯಾಪಿಠ ನಡೆಸಲು ಅವರ ಕರ್ತೃತ್ವ ಶಕ್ತಿ ಹಾಗೂ ಶ್ರೀಗಳ ಅನುಗ್ರಹ ಕಾರಣ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಆಕಾಶದಷ್ಟು ಎತ್ತರದ ವ್ಯಕ್ತಿತ್ವ ಪಂ. ಪ್ರದ್ಯುಮ್ನಾಚಾರ್ಯರದು. ಅವರಂತಹ ಮಹಾನುಭಾವರ ಮಾರ್ಗದರ್ಶನದಿಂದ ನಾನು ನಾಯಕನಾಗಿ ಹೊರಹೊಮ್ಮಿದ್ದೇನೆ. ನಾವು ಎನ್ನುವ ತತ್ವವನ್ನು ಅವರು ಬಿತ್ತಿದ್ದಾರೆ. ಹಿಂದು ಧರ್ಮದ ಟೀಕೆ ಮಾಡುವ ಗುಂಪುಗಳು ಈಗ ಬೆಳೆದಿವೆ. ಆದರೆ, ಪಂಡಿತರು ಶಿಷ್ಯ ವೃಂದ ಬೆಳೆಸಿದ್ದಾರೆ. ಆ ಮೂಲಕ ಹಿಂದು ಧರ್ಮ ಬೆಳೆಸಲು ಶ್ರಮಿಸುತ್ತಿದ್ದಾರೆ ಎಂದರು.

ಖ್ಯಾತ ವೈದ್ಯ ಡಾ. ವಿ.ಜಿ. ನಾಡಗೌಡ ಮಾತನಾಡಿ, ಆಚಾರ್ಯರೊಂದಿಗಿನ ತಮ್ಮ ಸಂಬಂಧ ದಶಕಗಳದ್ದು, ಭಾಗವತ ಪ್ರವಚನ ಮೂಲಕ ಅವರು ಮನೆಮಾತಾಗಿದ್ದಾರೆ. ಅವರ ಸಾಮಾಜಿಕ ಕಾರ್ಯ ಅವಿಸ್ಮರನೀಯ. ಅವರು ಆಯೋಜಿಸುವ ಭಾಗವತ ಸಪ್ತಾಹದಲ್ಲಿ ಸಂಗೀತ, ಪ್ರವಚನ ಎಲ್ಲವೂ ಇರುತ್ತದೆ ಎಂದರು.

ಪಂ. ಸತ್ಯಧ್ಯಾನಾಚಾರ್ಯ ಕಟ್ಟಿ ಅವರು ಮಾತನಾಡಿ, ಪಂ. ಪ್ರದ್ಯುಮ್ನಾಚಾರ್ಯರು ಹುಬ್ಬಳ್ಳಿಯಲ್ಲಿ ವಿಶೇಷ ಕ್ರಾಂತಿ ಮಾಡಿದ್ದಾರೆ. ಧರ್ಮದ ಕ್ರಾಂತಿಯನ್ನು ಭಾರತದ ಉದ್ದಗಲಕ್ಕೂ ಪಸರಿಸಿದ್ದಾರೆ. ಅವರು ಉತ್ತಮ ವಾಗ್ಮಿಗಳು. ಅವರಿಂದ ಸಮಾಜಕ್ಕೆ ಹೆಚ್ಚಿನ ಸೇವೆ ಸಿಗಲಿ ಎಂದು ಹೇಳಿದರು.

ಪಂ. ಮೊಕಾಶಿ ಮಧ್ವಾಚಾರ್ಯರು, ಮಾಹುಲಿ ಆಚಾರ್ಯರು ಮಾತನಾಡಿದರು.
ಪಂ. ಪ್ರದ್ಯುಮ್ನಾಚಾರ್ಯ ಜೋಶಿ ಅವರನ್ನು ಫಲಪುಷ್ಪ ನೀಡಿ ಗೌರವಿಸಲಾಯಿತು. ನೂರಾರು ಜನರು ಅವರಿಗೆ ಅಭಿನಂದನೆ ಸಲ್ಲಿಸಿದರು.
ಡಾ. ಎಂ.ಎಂ. ಜೋಶಿ. ಕೇಶವ ದೇಸಾಯಿ, ಗೋವಿಂದ ಜೋಶಿ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಇತರರು ಇದ್ದರು.

ಸಾನ್ನಿಧ್ಯ ವಹಿಸಿದ್ದ ಉತ್ತರಾದಿಮಠದ ಶ್ರೀಸತ್ಯಾತ್ಮತಿರ್ಥ ಶ್ರೀಪಾದಂಗಳು ಆಶೀರ್ವಚನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net