ದೇಶಕ್ಕೆ ಪಂಡಿತ್ ದೀನದಯಾಳ್ ಉಪಾಧ್ಯಾಯರ ಕೊಡುಗೆ ಅಪಾರ

25 bannur 2..
Published on

ಬನ್ನೂರು: ಪಟ್ಟಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಸೇವಾ ಪಾಕ್ಷಿಕ್ ಅಭಿಯಾನ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನವನ್ನು ಪರಿಸರ ಜಾಗೃತಿ ಮೂಡಿಸುವ ಮೂಲಕ ಆಚರಿಸಲಾಯಿತು.

ಪಟ್ಟಣದ ಬಸವೇಶ್ವರ ಮಂದಿರದ ಆವರಣದಲ್ಲಿ ಗುರುವಾರ ಗಿಡ ನೆಡುವ ಮೂಲಕ ಜನ್ಮ ದಿನ ಆಚರಿಸಿದ ಬಳಿಕ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಎನ್.ಎಂ.ರಾಮಚಂದ್ರ, ದೀನದಯಾಳರು ತ್ಯಾಗಮಯಿ ಜೀವನದ ಮೂಲಕ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇವರ ಚಿಂತನೆಯೇ ಇಂದಿನ ಬಿಜೆಪಿ ನೀತಿಗಳಿಗೆ ಬೌದ್ಧಿಕ ಬುನಾದಿಯಾಗಿದೆ. ಪಾಶ್ಚಾತ್ಯ ಸಿದ್ಧಾಂತಗಳಿಗೆ ಪರ್ಯಾಯವಾಗಿ ಭಾರತೀಯ ಸಂಸ್ಕೃತಿ ಬೇರುಗಳಿಂದ ಏಕಾತ್ಮ ಮಾನವ ದರ್ಶನ ನೀಡಿದರು.

1953ರಿಂದ 1968ರವರೆಗೆ ಭಾರತೀಯ ಜನ ಸಂಘದ ನಾಯಕರಾಗಿ, ಅತ್ಯುನ್ನತ ಮಾನದಂಡವನ್ನು ಕಾಯ್ದುಕೊಂಡ ಧೀಮಂತ ನಾಯಕ, ರಾಷ್ಟ್ರ ಧರ್ಮ ಪ್ರಕಾಶನ ಎಂಬ ಸಂಸ್ಥೆ ಸ್ಥಾಪಿಸಿ, ರಾಷ್ಟ್ರ ಧರ್ಮ ಎನ್ನುವಂತ ಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ ಕೀರ್ತಿ ಉಪಾಧ್ಯಾಯರಿಗೆ ಸಲ್ಲುತ್ತದೆ. ಅವರ ಸಂಘಟನಾ ಕೌಶಲ ಅಪ್ರತಿಮವಾಗಿದ್ದು, ಜನಸಂಘದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದರು.

ಟೌನ್ ಅಧ್ಯಕ್ಷ ಕಾಳೇಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಭವ್ಯಾ, ದಾಸೇಗೌಡ, ಮಣಿಕಂಠ, ಜಯರಾಮೇಗೌಡ, ಸುರೇಶ್, ಗುರು ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net