

ಸವಣೂರ: ನಿರಂತರ ಮಳೆಯಿಂದಾಗಿ ತಾಲೂಕಿನ ಬರದೂರ ಗ್ರಾಮದ ಹೊರ ವಲಯದಲ್ಲಿ ಪಂಢರಪುರ ಪಾದಯಾತ್ರೆ ಕೈಗೊಂಡಿರುವ ಭಕ್ತರು ವಿಶ್ರಾಂತಿ ಪಡೆಯಲು ತಂಗಿದ್ದ ಶ್ರೀಮಠದ ಸುತ್ತ ಸೋಮವಾರ ಮಳೆ ನೀರು ತುಂಬಿಕೊಂಡಿದ್ದರಿಂದ ಭಕ್ತರು ಪರದಾಡುವಂತಾಯಿತು.
ಭಾನುವಾರ ಸಂಜೆ ಹಾವೇರಿ ತಾಲೂಕು ತೋಟದಯಲ್ಲಾಪುರದಿಂದ ತಾಲೂಕಿಗೆ ಆಗಮಿಸಿದ ಪಾದಯಾತ್ರಿಕರ ತಂಡದ 24 ಭಕ್ತರು ಬರದೂರ ಗ್ರಾಮದ ಹೊರವಲಯದ ರಾಮಲಿಂಗೇಶ್ವರ ಮಠದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು. ರಾತ್ರಿಯಿಡಿ ಮಳೆ ಸುರಿದು ಬಾಜಿರಾಯನಹಳ್ಳ ತುಂಬಿ ಹರಿದು ಶ್ರೀಮಠದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಬೆಳಗ್ಗೆ ಪಾದಯಾತ್ರಿಕರು ಮಠದ ಸುತ್ತ ನೀರು ತುಂಬಿಕೊಂಡಿರುವದನ್ನು ಕಂಡು ಭಯಭೀತರಾಗಿ ಕಿರುಚಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು, ಹಾವೇರಿ ಅಗ್ನಿಶಾಮಕ ಹಾಗೂ ತುರ್ತು ನಿರ್ವಹಣಾ ಸಮಿತಿ ಸಿಬ್ಬಂದಿ ಸಹಾಯದಿಂದ 24 ಪಂಢರಪುರ ಪಾದಯಾತ್ರೆ ಭಕ್ತರು ಹಾಗೂ 4 ಶ್ರೀಮಠದ ಸಹಾಯಕರು ಸೇರಿ ಒಟ್ಟು 28 ಜನರನ್ನು ಎನ್ಡಿಆರ್ಎಫ್ ರಕ್ಷಣಾ ತಂಡದವರು ಕಾಪಾಡಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ತಹಸೀಲ್ದಾರ್ ತಹಸೀಲ್ದಾರ್ ಭರತರಾಜ್ ಕೆ.ಎನ್., ತಾಪಂ ಇಒ ನವೀನಪ್ರಸಾದ ಕಟ್ಟಿಮನಿ, ಅಗ್ನಿಶಾಮಕದಳದ ಜಿಲ್ಲಾ ಮಟ್ಟದ ಅಧಿಕಾರಿ ವಿನಯ ಹಾಗೂ ಇತರರು ಭೇಟಿ ನೀಡಿ ಭಕ್ತರಿಗೆ ಧೈರ್ಯ ಹೇಳಿ, ಮುಂದಿನ ಪಾದಯಾತ್ರೆಗೆ ಬೀಳ್ಕೊಟ್ಟರು.
ಅಪಾರ ಬೆಳೆ, ಮನೆ ಹಾನಿ
ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಚಿಕ್ಕಬೂದಿಹಾಳ, ಬರದೂರ, ಸವೂರ, ಕುರಬರಮಲ್ಲೂರ, ಹುರಳಿಕುಪ್ಪಿ, ನಂದಿಹಳ್ಳಿ, ತೆಗ್ಗಿಹಳ್ಳಿ, ಮಣ್ಣೂರ, ಗುಂಡೂರ, ಮಂತ್ರೋಡಿ, ಕಾರಡಗಿ, ಜೇಕಿನಕಟ್ಟಿ ಸೇರಿ ವಿವಿಧ ಗ್ರಾಮಗಳಲ್ಲಿ ಸಾವಿರಾರು ಹೆಕ್ಟೇರ್ ಬೆಳೆ ಸಂಪೂರ್ಣ ಹಾನಿಗೀಡಾಗಿದೆ.
ಮಣ್ಣೂರ ಹತ್ತಿರ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ 4 ತಾಸು ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಚಿಕ್ಕಬೂದಿಹಾಳ, ಬರದೂರ, ಸವೂರ ಮತ್ತಿತರ ಗ್ರಾಮಗಳಲ್ಲಿ ಮನೆಗೆ ನೀರು ನುಗ್ಗಿದೆ.
ನಿರಂತರ ಮಳೆಯಿಂದ ವಿವಿಧ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ಬರದೂರ ಸೇರಿ ಕೆಲ ಗ್ರಾಮಗಳ ಸರ್ಕಾರಿ ಶಾಲೆಯಲ್ಲಿ ಗಂಜಿಕೇಂದ್ರ ತೆರೆಯಲಾಗಿದೆ. | ಭರತರಾಜ್ ಕೆ.ಎನ್., ತಹಸೀಲ್ದಾರ್