

ಮಂಗಳೂರು: ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂದು ಅಶಕ್ತರ ಪಾಲಿಗೆ ಬೆಳಕಾಗಿ ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ಅವರು ಯಂಗ್ ಬ್ರದರ್ಸ್ ಸ್ಪೋರ್ಟ್ಸ್ ಮೂಲಕ ಮಾಡುತ್ತಿರುವ ಸೇವಾ ಚಟುವಟಿಕೆ ಮಾದರಿ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಪಾಂಡೇಶ್ವರ ದೇವಳದ ದೀಪೋತ್ಸವದ ಅಂಗವಾಗಿ ಯಂಗ್ ಬ್ರದರ್ಸ್ ಸ್ಪೋರ್ಟ್ಸ್ ಅಶ್ವತ್ಥಕಟ್ಟೆ ಇದರ ವತಿಯಿಂದ ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ನೇತೃತ್ವದಲ್ಲಿ ಸೋಮವಾರ ರಾತ್ರಿ ನಡೆದ ಸ್ಟಾರ್ ನೈಟ್ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸೇವಾ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.
ಕಳೆದ 18 ವರ್ಷಗಳಿಂದ ನಿರಂತರವಾಗಿ ಸೇವಾ ಚಟುವಟಿಕೆಯ ಮೂಲಕ ಬಡವರ ಪಾಲಿಗೆ ಬೆಳಕನ್ನು ಹರಿಸುವ ಕೆಲಸ ಮಾಡುತ್ತಿರುವುದು ಯುವ ಜನರಿಗೆ ಪ್ರೇರಣೆಯಾಗಿದೆ. ಇನ್ನಷ್ಟು ಸೇವಾ ಕಾರ್ಯಕ್ರಮಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಸ್ಟಾರ್ ನೈಟ್ ಕಾರ್ಯಕ್ರಮದ ಸಂಘಟಕ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ನಾಗರಿಕರು, ದಾನಿಗಳು ಹಾಗು ಯಂಗ್ ಬ್ರದರ್ಸ್ ತಂಡದ ಸಹಕಾರದಿಂದ ಸೇವಾ ಚಟುವಟಿಕೆಯಲ್ಲಿ ತೊಡಗಲು ಸಾಧ್ಯವಾಗಿದೆ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಜಯಾನಂದ ಅಂಚನ್, ಬಿಜೆಪಿ ದಕ್ಷಿಣ ಮಂಡಲದ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸ್ವಾವಲಂಬಿ ಜೀವನಕ್ಕಾಗಿ ವಿವಿಧ ವಾರ್ಡ್‌ಗಳ 29 ಮಂದಿಗೆ ಹೊಲಿಗೆ ಯಂತ್ರ ಹಾಗೂ ಒಬ್ಬರಿಗೆ ಗಾಲಿ ಕುರ್ಚಿ ವಿತರಿಸಲಾಯಿತು. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ಕರಾಟೆಪಟು ಋತ್ವಿನ್ ಆರ್.ವಿ. ಅವರನ್ನು ಸನ್ಮಾನಿಸಲಾಯಿತು. ಆಗಮಿಸಿದ್ದ ಮನಪಾ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಾಮಾಜಿಕ ರಂಗದ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ಉಳ್ಳಾಲ ಮಾರುತಿ ಜನ ಸೇವಾ ಸಂಘ ಹಾಗೂ ಈ ಬಾರಿ ಮೂರು ಕಡೆ ಹುಲಿ ವೇಷ ಸ್ಫರ್ಧೆಯಲ್ಲಿ ಚಾಂಪಿಯನ್ ಆದ ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ಇವರ ಜಗದಂಬಾ ಹುಲಿ ತಂಡವನ್ನು ಸನ್ಮಾನಿಸಲಾಯಿತು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಸ್ವಾಗತಿಸಿ, ವರದಿ ವಾಚಿಸಿದರು. ಯಂಗ್ ಬ್ರದರ್ಸ್ ಅಧ್ಯಕ್ಷ ರಾಜೇಶ್ ಪಾಂಡೇಶ್ವರ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ಟಾರ್ ನೈಟ್ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು. ವಿಶೇಷ ಆಹ್ವಾನಿತ ನಟ ರೂಪೇಶ್ ಶೆಟ್ಟಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.