

ಮಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿ ಕರ್ತವ್ಯ ಲೋಪ ಎಸಗಿದ ಪಾಂಡೇಶ್ವರ ಠಾಣೆಯ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಶ್ರೀಲತಾ ಅವರನ್ನು ಅಮಾನತು ಮಾಡಲಾಗಿದೆ.
ಪ್ರಕರಣ ವಿವರ: ಗಂಡ-ಹೆಂಡತಿ ಗಲಾಟೆ ವಿಚಾರದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿರುತ್ತದೆ. ಈ ಬಗ್ಗೆ ಮಾಹಿತಿ ಪಡೆದ ಕ್ಲಾಕ್‌ಟವರ್ ಬಳಿಯ 112 ತುರ್ತು ವಾಹನದಲ್ಲಿದ್ದ ಪಾಂಡೇಶ್ವರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಶ್ರೀಲತಾ ಖಾಸಗಿ ವಾಹನವೊಂದರಲ್ಲಿ ತೆರಳಿ ಸಂಬಂಧಪಟ್ಟ ಪಾರ್ಟಿಯ ಜತೆ ಸಂಧಾನ ನೆಪದಲ್ಲಿ ವ್ಯವಹಾರ ಕುದುರಿಸುತ್ತಾರೆ. ಇದನ್ನು ಪ್ರತಿದೂರುದಾರರು ಗಮನಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದರು. ಇದನ್ನು ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಗಮನಿಸಿದ್ದು, ಇದೇ ವಿಷಯಕ್ಕೆ ಪ್ರತಿ ದೂರುದಾರರ ಮಧ್ಯೆ ವಾದ-ಪ್ರತಿವಾದಗಳು ನಡೆದಿತ್ತು.
ಕರ್ತವ್ಯಕ್ಕೆ ಅಡ್ಡಿ ದೂರು: ಪ್ರಕರಣ ನಡೆದ ಬಳಿಕ ಸುಮ್ಮನಾಗದ ಶ್ರೀಲತಾ ಪಾಂಡೇಶ್ವರ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಎಂದು ದೂರು ದಾಖಲಿಸಿದ್ದರು. ಇದು ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ತಂಡಕ್ಕೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ತಮಗಾದ ಅನ್ಯಾಯ ಹಾಗೂ ಶ್ರೀಲತಾ ಅವರ ಲಂಚದ ಬೇಡಿಕೆಯಿರಿಸಿದ ಬಗ್ಗೆ ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತ ಅಂಶುಕುಮಾರ್ ಶ್ರೀವಾಸ್ತವ್, ಈ ಹಿಂದಿನ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಅಂಶುಕುಮಾರ್ ಮತ್ತು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತನಿಖೆಗೆ ಆದೇಶ ಮಾಡಿದ್ದರು. ಆ ಬಳಿಕ ಶಶಿಕುಮಾರ್‌ಗೆ ವರ್ಗಾವಣೆಯಾಗಿದ್ದು, ಇದಾದ ಬಳಿಕ ಅಧಿಕಾರ ಸ್ವೀಕರಿಸಿದ ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಅವರು ಶ್ರೀಲತಾ ಅಮಾನತಿಗೆ ಗ್ರೀನ ಸಿಗ್ನಲ್ ನೀಡಿದ್ದಾರೆ. ಡಿಸಿಪಿ ಅಂಶುಕುಮಾರ್ ಮತ್ತು ಪೊಲೀಸ್ ಕಮಿಷನರ್ ಕ್ರಮ ಎಲ್ಲರ ಶ್ಲಾಘನೆಗೂ ಪಾತ್ರವಾಗಿದೆ.
ಇದೇ ಮೊದಲಲ್ಲ: ಹೆಡ್‌ಕಾನ್‌ಸ್ಟೇಬಲ್ ಶ್ರೀಲತಾ ಎಂಬಾಕೆ ಮೇಲೆ ಈ ರೀತಿ ಪ್ರಕರಣ ಇದೇ ಮೊದಲಲ್ಲ. ಪದೇ ಪದೇ ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಲೇ ಇದ್ದವು. ಈ ಹಿಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದಾಗ ಗಂಡ-ಹೆಂಡತಿ ಪ್ರಕರಣವೊಂದರಲ್ಲಿ ಇದೇ ಮಾದರಿ ಗಲಾಟೆಯಾಗಿ, ರಾದ್ಧಾಂತವಾಗಿತ್ತು. ಇದಾದ ಬಳಿಕ ಠಾಣೆಯಲ್ಲಿ ಸಿಸಿ ಕ್ಯಾಮೆರಾ ದಾಖಲೆಗಳನ್ನು ಡಿಲೀಟ್ ಮಾಡಿಸಿದ ಶ್ರೀಲತಾ ಅವರು ಈ ಘಟನೆಯಲ್ಲೂ ದೂರುದಾರರ ಮೇಲೆ ಕರ್ತವ್ಯಕ್ಕೆ ಅಡ್ಡಿ ದೂರು ದಾಖಲಿಸಿದ್ದರು.