ಬೀದಿ ನಾಯಿ ದಾಳಿಯಿಂದ ಮಗುವಿಗೆ ಗಾಯ

Stop-Dog-Barking-Training (1)
Published on

ಪಾಂಡವಪುರ: ಬೀದಿ ನಾಯಿ ದಾಳಿ ನಡೆಸಿದ ಪರಿಣಾಮ ಒಂದೂವರೆ ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದೆ.
ಪಟ್ಟಣದ ಪೊಲೀಸ್ ವಸತಿ ಗೃಹದಲ್ಲಿ ವಾಸವಿರುವ ಮಹಿಳಾ ಪೊಲೀಸ್ ಪೇದೆ ರೂಪಾ ಅವರ ಒಂದೂವರೆ ವರ್ಷದ ಸಂಪ್ರೀತ್ ಗಾಯಗೊಂಡಿರುವ ಮಗು.
ಶನಿವಾರ ಸಂಜೆ ಮನೆ ಮುಂಭಾಗ ಆಟವಾಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ಮುಖವನ್ನು ತೀವ್ರವಾಗಿ ಗಾಯಗೊಳಿಸಿದೆ. ದಾಳಿಯಿಂದ ಮಗುವಿನ ತುಟಿ, ಕೆನ್ನೆ ಮತ್ತು ದೇಹದ ಇತರ ಭಾಗಗಳಲ್ಲಿ ಗಂಭೀರ ಗಾಯವಾಗಿದೆ. ಮಗುವಿನ ಕಿರುಚಾಟ ಕೇಳಿದ ಪಾಲಕರು ತಕ್ಷಣ ನಾಯಿಯಿಂದ ಮಗುವನ್ನು ರಕ್ಷಿಸಿ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿ: ಪೊಲೀಸ್ ವಸತಿ ಗೃಹದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಈ ಬಗ್ಗೆ ಹಲವು ಬಾರಿ ಪುರಸಭೆ ಮುಖ್ಯಾಧಿಕಾರಿಗೆ ಅರ್ಜಿ ಬರೆದು ನಾಯಿಗಳಿಂದ ರಕ್ಷಣೆ ಒದಗಿಸುವಂತೆ ಕೋರಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆಯೂ ವಸತಿ ಗೃಹದಲ್ಲಿ ಬೀದಿ ನಾಯಿಗಳಿಂದ ಇಂಥ ದಾಳಿಗಳು ನಡೆದಿದೆ ಎಂದು ಮಗುವಿನ ಪಾಲಕರು ಆತಂಕ ವ್ಯಕ್ತಪಡಿಸಿದರು.
ಉಪವಿಭಾಗೀಯ ಆಸ್ಪತ್ರೆ ನಾಮ್ ಕೇ ವಾಸ್ತೆ: ಗಾಯಗೊಂಡಿದ್ದ ಮಗುವನ್ನು ಚಿಕಿತ್ಸೆಗಾಗಿ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಕರ್ತವ್ಯನಿರತ ವೈದ್ಯರು ಚಿಕಿತ್ಸೆ ನೀಡಲು ಅಸಡ್ಡೆ ತೋರಿದರು. ಹಲವು ಬಾರಿ ಮನವಿ ಮಾಡಿದ ನಂತರ ಒಂದು ಇಂಜೆಕ್ಷನ್ ನೀಡಿ ಮೈಸೂರಿಗೆ ತೆರಳಿ ಎಂದು ಶಿಫಾರಸು ಮಾಡಿದರು. ಹೆಸರಿಗೆ ಮಾತ್ರ ಇದು ಉಪವಿಭಾಗೀಯ ಆಸ್ಪತ್ರೆಯಾಗಿದೆ ಎಂದು ನೊಂದ ಪಾಲಕರು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net