ಎರಡು ಗುಂಪುಗಳ ನಡುವೆ ಘರ್ಷಣೆ

16-pnp 3a
Published on

ಪಾಂಡವಪುರ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.


ಸೋಮವಾರ ರಾತ್ರಿ ಸುಮಾರು 8.30ರಲ್ಲಿ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಒಂದು ಗುಂಪಿನ ಅರುಣ್ (38) ಅಲಿಯಾಸ್ ಗಾಂಜಾ ಅರುಣ್ ಎಂಬಾತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಮತ್ತೊಂದು ಗುಂಪಿನ ಸದಸ್ಯರಾದ ಶಿವರಾಜು ಮತ್ತು ವಿಜಿಯಮ್ಮ ಅವರ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಸಂಬಂಧ ರವಿ(19) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.


ಘಟನೆ ವಿವರ: ಬಂಧಿತ ರವಿ ಮತ್ತು ಗಾಯಾಳು ಅರುಣ್ ಸಹೋದರ ವಿಜಿ ನಡುವೆ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಜಗಳ ಪ್ರಾರಂಭವಾಗಿದ್ದು, ಮತ್ತೆ ರಾತ್ರಿ ಇದೇ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ಗಾಯಾಳು ಅರುಣ್, ಸಹೋದರ ವಿಜಿ ಮತ್ತಿತರರು ಬಂಧಿತ ರವಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಬಾಗಿಲು, ಕಿಟಕಿ ಗ್ಲಾಸ್‌ಗಳನ್ನು ಪುಡಿ ಪುಡಿ ಮಾಡಿ, ರವಿ ಕುಟುಂಬ ಸದಸ್ಯರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.


ವಿಷಯ ತಿಳಿದ ರವಿ ಮತ್ತವರ ತಂಡ ಆಗಮಿಸಿ ಅರುಣ್ ಎಂಬಾತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.


ಈ ಸಂಬಂಧ ಪಾಂಡವಪುರ ಪೊಲೀಸರು ಎರಡು ಕಡೆಯವರಿಂದ ದೂರು ದಾಖಲಿಸಿಕೊಂಡಿದ್ದು, ಎರಡು ಗುಂಪಿನ ವಿಜಿ, ಅರುಣ್, ಸಂತೂ, ಚಿನ್ನಿ, ರವಿ, ಗಿರಿ, ರಮೇಶ, ನಾಗೇಶ ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಘಟನೆ ನಡೆದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಡಿ.ಆರ್. ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.


ಗಾಯಾಳು ಅರುಣ್‌ನನ್ನು ಪಟ್ಟಣದ ಉಪ ವಿಭಾಗೀಯ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net