ವಿದ್ಯುತ್ ಹರಿದು ಲೈನ್‌ಮನ್ ಸಾವು

9-pnp 2 B.A.LOKESH
Published on

ಪಾಂಡವಪುರ: ವಿದ್ಯುತ್ ಪರಿವರ್ತಕ ದುರಸ್ತಿ ವೇಳೆ ವಿದ್ಯುತ್ ಹರಿದು ಕಂಬದಲ್ಲೇ ಲೈನ್‌ಮನ್ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿದ್ದಾರೆ.
ನಾಗಮಂಗಲ ತಾಲೂಕಿನ ಚಿನಕುರಳಿ ಶಾಖೆಯ ಲೈನ್‌ಮನ್, ಭೂಸಂದ್ರ ಗ್ರಾಮದ ಬಿ.ಎ.ಲೋಕೇಶ್(30) ಮೃತರು. ತಾಲೂಕಿನ ದೊಡ್ಡಬೋಗನಹಳ್ಳಿ ಗ್ರಾಮದ ದಿನೇಶ್ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಲೋಕೇಶ್ ಮತ್ತು ದಿನೇಶ್ ಇಬ್ಬರು ಮಂಗಳವಾರ ಬೆಳಗ್ಗೆ ಹೊನಗಾನಹಳ್ಳಿಯ ವಿದ್ಯುತ್ ಪರಿವರ್ತಕವನ್ನು ಸರಿಪಡಿಸಲು ಮುಂದಾಗಿದ್ದರು. ಈ ವೇಳೆ ವಿದ್ಯುತ್ ಹರಿವನ್ನು ನಿಲ್ಲಿಸಲಾಗಿತ್ತು. ವಿದ್ಯುತ್ ಕಂಬವೇರಿ ಪರಿವರ್ತಕವನ್ನು ಪರಿಶೀಲಿಸುವಾಗ ತಂತಿಯಲ್ಲಿ ವಿದ್ಯುತ್ ಪ್ರಹರಿಸಿದ ಪರಿಣಾಮ ಲೈನ್‌ಮನ್ ಕಂಬದ ಮೇಲೆಯೇ ಮೃತಪಟ್ಟಿದ್ದಾರೆ. ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ದಿನೇಶ್ ತೀವ್ರವಾಗಿ ಗಾಯಗೊಂಡರು. ಸ್ಥಳಕ್ಕೆ ಸೆಸ್ಕ್ ಎಇಇ ಪುಟ್ಟಸ್ವಾಮಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕ್ರೋಶ: ಸೆಸ್ಕ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ. ವಿದ್ಯುತ್ ದುರಸ್ತಿಗಾಗಿ ತೆರಳುತ್ತಿರುವುದಾಗಿ ಕಚೇರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಲೈನ್‌ನಲ್ಲಿ ವಿದ್ಯುತ್ ಹರಿದಿದೆ. ಇದಕ್ಕೆ ಸೆಸ್ಕ್ ಅಧಿಕಾರಿಗಳೇ ನೇರ ಹೊಣೆಗಾರರು ಎಂದು ಗ್ರಾಮಸ್ಥರು ಮತ್ತು ಆತನ ಕುಟುಂಬದವರು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net