ನಿರಂತರ ಪರಿಶ್ರಮವೇ ಯಶಸ್ಸಿನ ಮೆಟ್ಟಿಲು: ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಸಲಹೆ

Pandavapur AC lecture Mandya
Published on

ನಾಗಮಂಗಲ: ವಿದ್ಯಾರ್ಥಿಗಳು ನಿರಂತರ ಓದು ಮತ್ತು ಪರಿಶ್ರಮ ಮೈಗೂಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಎ.ಆರ್.ಶ್ರೀನಿವಾಸ್ ಕರೆ ನೀಡಿದರು.

ತಾಲೂಕಿನ ದೇವಲಾಪುರ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಆಯೋಜಿಸಿದ್ದ ಪ್ರೇರಣಾದಾಯಕ ಉಪನ್ಯಾಸ ನೀಡಿದ ಅವರು, ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣುತ್ತಲೇ ಅದನ್ನು ನನಸು ಮಾಡಿಕೊಳ್ಳಲು ನಿರಂತರ ಪರಿಶ್ರಮ ಪಡಬೇಕು. ನಮ್ಮಲ್ಲಿ ಛಲ, ಪ್ರತಿಭೆ, ಆತ್ಮವಿಶ್ವಾಸ ಮತ್ತು ಬದ್ಧತೆಗಳು ಇದ್ದಲ್ಲಿ ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇರುವುದಿಲ್ಲ. ತಮ್ಮ ವಿದ್ಯಾರ್ಥಿ ಜೀವನದ ಕ್ಷಣಗಳನ್ನು ಸ್ಮರಿಸಿಕೊಂಡು ಸಧ್ಯದ ಹುದ್ದೆಯವರೆಗೂ ಸಾಗಿ ಬಂದ ಹಾದಿಯನ್ನು ಮಕ್ಕಳೊಂದಿಗೆ ಹಂಚಿಕೊಂಡು ಸ್ಫೂರ್ತಿ ತುಂಬಿದರು.

ಎಸ್‌ಎಸ್‌ಎಲ್ಸಿ ಪರೀಕ್ಷೆ ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದ್ದು, ಸಕಾರಾತ್ಮಕ ಮನೋಧೋರಣೆ ಹಾಗೂ ಓದಿದ್ದನ್ನು ಪದೇ ಪದೇ ಮನನ ಮಾಡಿಕೊಂಡು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಪಾಲಕರು, ಶಿಕ್ಷಕರು ಮತ್ತು ಗ್ರಾಮಸ್ಥರು ಹೆಮ್ಮೆ ಪಡುವಂತಹ ಸಾಧನೆ ಮಾಡಿ. ಶಾಲಾ ಕಲಿಕಾ ಪರಿಸರ ಹಾಗೂ ಮಕ್ಕಳ ಭಾಗವಹಿಸುವಿಕೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿ ದಾನಿಗಳ ನೆರವಿನಿಂದ ಈ ಶಾಲೆಯನ್ನು ಮತ್ತಷ್ಟು ಸಶಕ್ತಗೊಳಿಸುವ ಭರವಸೆ ನೀಡಿದ ಎಸಿ, ಮಕ್ಕಳೊಂದಿಗೆ ಸಂವಾದ ನಡೆಸಿ ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿದರ್ಶನಗಳೊಂದಿಗೆ ಅಗತ್ಯ ಮಾರ್ಗದರ್ಶನ ನೀಡಿದರು.

ಮುಖ್ಯಶಿಕ್ಷಕ ಎನ್.ಸಿ.ಶಿವಕುಮಾರ್, ಶಿಕ್ಷಕರಾದ ಗಿರೀಶ್, ತೋಂಟಾರಾಧ್ಯ, ಇಂದ್ರೇಶ್, ಅಂದಾನಿಗೌಡ, ನವೀನ್, ಕಾಂತರಾಜು, ಶ್ಯಾಮಲಾ, ಸೌಮ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net