ಪಂಚಮಸಾಲಿ ಸಮಾಜದ ಮೀಸಲು ಚರ್ಚೆ 18ರಂದು

h15-basavajaya mryutunjaya
Published on

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.18 ರಂದು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಚರ್ಚಿಸಲು ಸಭೆ ಕರೆದಿದ್ದಾರೆ. ನಮ್ಮ ಬೇಡಿಕೆಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂಬರುವ ವಿಧಾನಸಭೆ ಅಧಿವೇಶನದ ವೇಳೆ ಹೋರಾಟ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟದಲ್ಲಿ ಶೇ. 10ರಷ್ಟು ಮೀಸಲಾತಿ ದೊರೆತ ಬಳಿಕ ನಮ್ಮ ಬೇಡಿಯೂ ಈಡೇರಬಹುದು ಎಂಬ ವಿಶ್ವಾಸ ಚಿಗುರೊಡೆದಿದೆ. ಈವರೆಗೆ ನಡೆದ 6 ಹಂತಗಳ ಹೋರಾಟದ ಫಲವಾಗಿ ಕೊನೆಗೂ ಮುಖ್ಯಮಂತ್ರಿಗಳು ಚರ್ಚೆಗೆ ದಿನಾಂಕ ನಿಗದಿಪಡಿಸಿದ್ದಾರೆ. ಅವರೊಂದಿಗೆ ಚರ್ಚೆ ನಡೆಸಲು ವಿವಿಧ ಜಿಲ್ಲೆಯ 11 ಹಿರಿಯ ನ್ಯಾಯವಾದಿಗಳ ತಂಡ ರಚಿಸಲಾಗಿದೆ ಎಂದರು.
ಜ. 23ರ ದಿನಾಂಕ ನೀಡಿದ್ದ ಮುಖ್ಯಮಂತ್ರಿಗಳು ಅನಿವಾರ್ಯ ಕಾರಣಗಳಿಂದ ಭೇಟಿಯಾಗಿರಲಿಲ್ಲ. ಬಳಿಕ ಅ. 15ರ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ, ಮುಖ್ಯಮಂತ್ರಿಗಳ ಕಾರ್ಯಬಾಹುಳ್ಯದಿಂದ ಅಂದೂ ಚರ್ಚೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಅ. 18ರಂದು ಮಧ್ಯಾಹ್ನ 12.30ಕ್ಕೆ ಸಮಯ ನಿಗದಿಗೊಳಿಸಿದ್ದಾರೆ. ಅಂದಿನ ಚರ್ಚೆಯಲ್ಲಿ ಮುಖ್ಯಮಂತ್ರಿಗಳ ಸ್ಪಂದನೆ ನೋಡಿಕೊಂಡು ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದರು.
ಅ. 18ರಂದು ಸಮಾಜದ ಮಾಜಿ, ಹಾಲಿ ಶಾಸಕರು, ಸಚಿವರು, ಗಣ್ಯರು ಆಗಮಿಸಲಿದ್ದಾರೆ. ಸದಾ ಸಮಾಜದ ಏಳಿಗೆ ಮತ್ತು ಜನರ ಕಲ್ಯಾಣ ಬಯಸುವ ಸಿದ್ದರಾಮಯ್ಯ ಅವರು, ನಮ್ಮ ಬೇಡಿಕೆ ಮನ್ನಿಸಿ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡುತ್ತಾರೆ ಎಂಬ ಭರವಸೆ ಇದೆ ಎಂದರು.
ಜಾತಿ ಜನಗಣತಿಗೆ ನಮ್ಮ ವಿರೋಧವಿಲ್ಲ. ಆದರೆ, ಈ ಹಿಂದೆ ಮಾಡಲಾದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೇ ಜಾತಿ ಗಣತಿ ಎಂದು ಪರಿಗಣಿಸಿರುವುದಕ್ಕೆ ನಮ್ಮ ವಿರೋಧವಿದೆ. ಸಂವಿಧಾನ ಬದ್ಧವಾಗಿ ಮನೆ ಮನೆಗೂ ಭೇಟಿ ನೀಡಿ, ನಿಖರ ದತ್ತಾಂಶ ಸಂಗ್ರಹಿಸಿ ಜಾತಿ ಗಣತಿ ಮಾಡಿದರೆ ಅದನ್ನು ಸ್ವಾಗತಿಸುತ್ತೇವೆ. ಮೇಲಾಗಿ ಹಿಂದೆ ಮಾಡಲಾದ ಸಮೀಕ್ಷೆಯಲ್ಲಿ ಲಿಂಗಾಯತ ಸಮುದಾಯದವರ ಸಂಖ್ಯೆ ಕಡಿಮೆ ಇದೆ ಎಂದು ತಿಳಿದುಬಂದಿದೆ. ಹೀಗಾಗಿ ವೈಜ್ಞಾನಿಕ ತಳಹದಿ ಮೇಲೆ ಜಾತಿ ಗಣತಿ ಮಾಡಿಸಬೇಕು ಎಂದು ಆಗ್ರಹಿಸಿದರು.
ಯಾರೇ ಒಳ್ಳೆಯ ಕೆಲಸ ಮಾಡಿದರೂ ಅವರಿಗೆ ಬೆಂಬಲ ನೀಡುತ್ತೇವೆ. ಈ ನಿಟ್ಟಿನಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರ ಹೋರಾಟ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಾಂದಿಯಾಗಲಿ ಮತ್ತು ನಾಡಿನಲ್ಲಿ ಶಾಂತಿ ನೆಲೆಸುವಂತಾಗಲಿ ಎಂದರು.
ಪ್ರಮುಖರಾದ ಜಿ.ಜಿ. ದ್ಯಾವನಗೌಡ್ರ, ಶಶಿಶೇಖರ ಡಂಗನವರ, ಶಂಕರಗೌಡ್ರ ನಾಗನಗೌಡ್ರ, ಗುರು ಕೆಲಗೇರಿ, ನಾಗರಾಜ ಗಂಜಿಗಟ್ಟಿ, ಶ್ರೀಕಾಂತ ಗುಳೇದ, ಬಾಪೂಗೌಡ ಸಾಬಳದ, ಶಶಿಧರ ಕೊಟಗಿ, ಚಂದ್ರು ಹೊಂಬಳ, ಅನಿತಾ ಪಾಟೀಲ, ರತ್ನ ದಾನಮ್ಮನವರ, ವೈ.ಯು. ಮುದಿಗೌಡರ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net