

ವಿಜಯಪುರ: ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ನಡೆದ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಅವಹೇಳನಕಾರಿಯಾಗಿ ಟೀಕಿಸಿ ಪೋಸ್ಟ್ ಮಾಡಿದ ವ್ಯಕ್ತಿಯ ಬಂಧನಕ್ಕೆ ಆಗ್ರಹಿಸಿ ಸಿದ್ದರಾಮಯ್ಯನವರ ಅಭಿಮಾನಿಗಳು ನಡೆಸಿದ ಹೋರಾಟಕ್ಕೆ ಮಣಿದ ಪೊಲೀಸರು ಕೊನೆಗೂ ಪೋಸ್ಟ್ ಮಾಡಿದಾತನ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
ದೇವರಹಿಪ್ಪರಗಿ ತಾಲೂಕಿನ ಬೋರಗಿ ಗ್ರಾಮದಲ್ಲಿ ಡಿ. 15 ರಂದು ಈ ಘಟನೆ ನಡೆದಿದ್ದು, ಈರಣ್ಣ ಬಸವಂತರಾಯ ರಟಗಲ್ ಎಂಬಾತನ ಮೇಲೆ ಎಫ್‌ಐಆರ್ ದಾಖಲಾಗಿದೆ.
ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ನಡೆದ ಲಾಠಿ ಚಾರ್ಜ್ ವಿಚಾರವನ್ನಿಟ್ಟುಕೊಂಡು ಈರಣ್ಣ ರಟಗಲ್ ಸಿದ್ದರಾಮಯ್ಯ ಅವರ ಫೋಟೊವನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದಲ್ಲದೇ ‘ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಅಂಗವಾಗಿ ಶಾಂತಿಯುತವಾಗಿ ಸುವರ್ಣ ಸೌಧ ಮುತ್ತಿಗೆ ಹಾಕುವಾಗ ಲಾಠಿ ಚಾರ್ಜ್ ಮಾಡಿಸಿದ ಸಿದ್ದರಾಮಯ್ಯ.....’ ಎಂದು ನಮೂದಿಸಿ ಮುಂದೆ ಅವಾಚ್ಯವಾಗಿ ನಿಂದಿಸಿ ‘ಯಾರು ನಮ್ಮ ರಕ್ತ ಹರಿಸಲು ಕಾರಣರಾದರೋ ಅವರ ರಕ್ತವನ್ನು ಅದೇ ಸ್ಥಳದಲ್ಲಿ ಹರಿಸೋಣ’ ಎಂಬಿತ್ಯಾದಿ ಪ್ರಚೋದನಕಾರಿ ಹೇಳಿಕೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದನು.
ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಸಿದ್ದರಾಮಯ್ಯ ಅವರ ಅಭಿಮಾನಿಗಳು ರಸ್ತೆ ತಡೆ ನಡೆಸಿ, ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದರು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಪೋಸ್ಟ್ ಮಾಡಿದ ಈರಣ್ಣ ಅವರ ಮೇಲೆ ದೇವರಹಿಪ್ಪರಗಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.