ಪಂಚಮಸಾಲಿ 2ಎ ಮೀಸಲಾತಿ ಬೇಡಿಕೆ, ಡಿ. 10ರಂದು ಸುರ್ವಣಸೌಧ ಮುತ್ತಿಗೆ ಹಾಕಲು ನಿರ್ಧಾರ

PANCHAMASALI HORATA SAMITI
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಸ್. ರುದ್ರಗೌಡರ ಸುದ್ದಿಗೋಷ್ಠಿ ನಡೆಸಿದರು. ಶರಣಬಸಪ್ಪ ಗಮಶೆಟ್ಟಿ, ದಾನೇಶ ಅವಟಿ, ನಿಂಗನಗೌಡ ಸೋಲಾಪುರ ಮತ್ತಿತರರಿದ್ದಾರೆ.
Published on

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಡಿ. 10 ರಂದು ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಸ್. ರುದ್ರಗೌಡರ ಹೇಳಿದರು.

ಕಳೆದ ಹಲವು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದರೂ ಆಳುವ ವರ್ಗ ಸ್ಪಂದಿಸುತ್ತಿಲ್ಲ. ಈ ಹಿಂದೆ 2 ಡಿ ಮೀಸಲಾತಿ ಕಲ್ಪಿಸಿದಾಗ ಹೋರಾಟಕ್ಕೆ ಮೊದಲ ಹಂತದ ಜಯ ಎಂದು ಭಾವಿಸಲಾಗಿತ್ತು. ಮೀಸಲಾತಿ ವಿಚಾರದಲ್ಲಿ ಅಂದಿನ ಸರ್ಕಾರ ಒಂದು ಹೆಜ್ಜೆಯನ್ನಾದರೂ ಮುಂದಿಟ್ಟಿದೆ ಎಂಬ ಸಮಾಧಾನ ಇತ್ತು. ಆ ಬಳಿಕ 2ಎ ಮೀಸಲಾತಿ ಬಗ್ಗೆ ಸಾಕಷ್ಟು ಬಾರಿ ಧ್ವನಿ ಎತ್ತಿದರೂ ಸರ್ಕಾರ ಸ್ಪಂದಿಸದ ಹಿನ್ನೆಲೆ ಇದೀಗ ಸುವರ್ಣಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಡಿ. 10 ರಂದು ನಡೆಯುವ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕು. ಇಲ್ಲವಾದಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕುವುದು ನಿಶ್ಚಿತ. ಈಗಾಗಲೇ 10 ಸಾವಿರ ಟ್ರ್ಯಾಕ್ಟರ್‌ಗಳು ಹಾಗೂ ಲಕ್ಷಾಂತರ ಸಮಾಜ ಬಾಂಧವರು ಬೆಳಗಾವಿಗೆ ಹೊರಡಲು ಸಜ್ಜಾಗಿದ್ದು, ವಿಜಯಪುರ ಜಿಲ್ಲೆಯೊಂದರಿಂದಲೇ ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ನಮ್ಮದೇ ಸಮಾಜದ ಕೆಲವು ಕಾಂಗ್ರೆಸ್ ನಾಯಕರು ತಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿಯೇ ಮೀಸಲಾತಿ ಕಲ್ಪಿಸುವುದಾಗಿ ವಾಗ್ದಾನ ಮಾಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಾ ಬಂದರೂ ಆ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಇವರನ್ನು ಹತ್ತಿರವೂ ಸೇರಿಸುತ್ತಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಕುರಿತು ವಾಗ್ದಾಳಿ ನಡೆಸಿದರು. ಅಲ್ಲದೇ, ನಮಗೆ ಯಾವುದೇ ಪಕ್ಷ ಸಂಬಂಧ ಇಲ್ಲ. ಯಾರು ಸಮಾಜಕ್ಕಾಗಿ ದುಡಿಯುತ್ತಾರೋ ಅವರಿಗೆ ನಮ್ಮ ಬೆಂಬಲ ಇದೆ. ಹೀಗಾಗಿ ಮುಖಂಡರು ಒಗ್ಗಟ್ಟಾಗಿ ಹೋರಾಡದೇ ಹೋದರೆ ಸಮಾಜ ನಿಮ್ಮನ್ನು ಸ್ವಾರ್ಥಿ ಎಂದು ಪರಿಗಣಿಸಬೇಕಾಗುತ್ತದೆ ಎಂದರು.

ಪಂಚಮಸಾಲಿ 2 ಮೀಸಲಾತಿಗಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಬಲವಾಗಿ ಧ್ವನಿ ಎತ್ತುತ್ತಿದ್ದಾರೆ. ಮೊದಲು ಮುರುಗೇಶ ನಿರಾಣಿ ನೇತೃತ್ವ ವಹಿಸಿ ಪಾದಯಾತ್ರೆ ಮಾಡಿದರಾದರೂ ಮಂತ್ರಿಯಾದ ಬಳಿಕ ಬಿಟ್ಟಿದ್ದರು. ಇದೀಗ ಮನಃ ಪರಿವರ್ತನೆಯಾಗಿದೆ ಎನ್ನಿಸುತ್ತದೆ. ಎಲ್ಲರೂ ಯತ್ನಾಳರ ರೀತಿ ಧ್ವನಿ ಎತ್ತಬೇಕೆಂದರು. ಅಲ್ಲದೇ, ವಿಜಯಾನಂದ ಕಾಶಪ್ಪನವರ ಕುರಿತು ಅಸಾಮಧಾನ ಹೊರಹಾಕುತ್ತಾ ಕಾಶಪ್ಪನವರ ಅವರನ್ನೇ ಮೀಸಲಾತಿ ಹೋರಾಟ ಸಮಿತಿಯಿಂದ ದೂರವಿಡಲು ತೀರ್ಮಾನಿಸಲಾಗಿದೆ ಎಂದರು.

ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ಪಂಚಮಸಾಲಿ ಸಮಾಜ ಸದ್ಯ ಕವಲುದಾರಿಯಲ್ಲಿದೆ. ಮೀಸಲಾತಿ ಸೌಲಭ್ಯದಿಂದ ವಂಚಿತವಾಗಿರುವ ಈ ಬಹುದೊಡ್ಡ ಸಮಾಜ ಶೋಚನೀಯ ಸ್ಥಿತಿಯಲ್ಲಿದೆ. ಹೀಗಾಗಿ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಚುರುಕುಗೊಂಡಿದ್ದು, ಇದೀಗ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕಲು ನಿರ್ಧರಿಸಲಾಗಿದ್ದು ಸರ್ಕಾರ ಎಚ್ಚೆತ್ತುಕೊಳ್ಳದೇ ಹೋದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ಪಂಚಸೇನಾ ಜಿಲ್ಲಾಧ್ಯಕ್ಷ ಶರಣಬಸಪ್ಪ ಗಮಶೆಟ್ಟಿ ಮಾತನಾಡಿ, ಮೀಸಲಾತಿ ಕೊಟ್ಟರೆ ಮುತ್ತಿನ ಹಾರ ಹಾಕುತ್ತೇವೆ. ಹೋರಾಟ ತಡೆಯಲೆತ್ನಿಸಿದರೆ ಸುವರ್ಣ ಸೌಧಕ್ಕೆ ಮುತ್ತಿಗೆ ನಿಶ್ಚಿತ. ಪೊಲೀಸರ ಮೂಲಕ ಸರ್ಕಾರ ಮಾನಸಿಕ ಸ್ಥೈರ್ಯ ಕುಸಿಯುಂತೆ ಮಾಡುತ್ತಿದೆ. ಇದನ್ನು ಸಹಿಸಲ್ಲ. ಸಮಾಜದ ಶಾಸಕರು ರಾಜಕಾರಣ, ಪಕ್ಷ ಬದಿಗೊತ್ತಿ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ಮುಖಂಡರಾದ ನಿಂಗನಗೌಡ ಸೋಲಾಪುರ, ಶ್ರೀಶೈಲ ಬುಕ್ಕಣ್ಣಿ, ಗುರುರಾಜ ಆಕಳವಾಡಿ, ಸಿದ್ದು ಹಳ್ಳೂರ, ಸದಾಶಿವ ಹಳ್ಳಿಗಿಡದ, ಸೋಮು ದೇವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net