ಹುಬ್ಬಳ್ಳಿಯಲ್ಲಿ ಪಂಚಗವ್ಯ ಆಯುರ್ವೇದ ಚಿಕಿತ್ಸೆ ವಿಚಾರಸಂಕಿರಣ

IMG_20230519_113906_804.jpg
Published on

ಹುಬ್ಬಳ್ಳಿ: ಗೋಸೇವಾ ಗತಿವಿಧಿ ಮತ್ತು ಆರೋಗ್ಯ ಭಾರತಿ ಕರ್ನಾಟಕ ಉತ್ತರ ಪ್ರಾಂತ ಹಾಗೂ ಪಂಚಗವ್ಯ ಆಯುರ್ವೇದ ವೈಜ್ಞಾನಿಕ ಸಮಾವೇಶ ಸಮಿತಿ ವತಿಯಿಂದ ಪಂಚಗವ್ಯ ಆಯುರ್ವೇದ ಚಿಕಿತ್ಸಾ ವಿಚಾರ ಸಂಕಿರಣವನ್ನು ಮೇ 21 ರಂದು ಬೆಳಗ್ಗೆ 9 ಗಂಟೆಗೆ ಇಲ್ಲಿನ ದೇಶಪಾಂಡೆನಗರ ಸವಾಯಿ ಗಂಧರ್ವ ಹಾಲ್ನಲ್ಲಿ ಏರ್ಪಡಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯ ಮಹಾಸಂರಕ್ಷಕರಾದ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು ಎಂದರು.

ಗುಜರಾತನ ಪಂಚಗವ್ಯ ಕ್ಲಿನಿಕಲ್ ರಜಿಸ್ಟ್ರಿ ಚೇರ್ಮನ್ ಡಾ. ಹಿತೇಶ್ ಜಾನಿ, ಗೋಸೇವಾ ಗತಿವಿಧಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖರಾದ ರಾವನ್ ಜಿ., ಬೆಂಗಳೂರಿನ ಆಯುರ್ವೇದ ವೈದ್ಯಕಿಯ ಕಾಲೇಜಿನ ಡಾ. ಆನಂದ ಕಟ್ಟಿ, ಪ್ರೊ. ಎಸ್. ರಾಮಚಂದ್ರ ಶೆಟ್ಟಿ, ಬೀದರನ ಡಾ. ವಿಜಯಕುಮಾರ ಬಿರಾದಾರ, ಡಾ. ಡಿ.ಪಿ. ರಮೇಶ್ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡುವರು.

ಬೆಳಗ್ಗೆಯಿಂದ ಸಂಜೆಯವರೆಗೂ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ. ಪಂಚಗವ್ಯ ಆಯುರ್ವೇದ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಸಂಜೆ 6ಕ್ಕೆ ಭಜನಸಂಧ್ಯಾ ಕಾರ್ಯಕ್ರಮ ನಡೆಯಲಿದ್ದು, ಭಕ್ತಿ ಸಂಗೀತ ಸಾಮ್ರಾಟ ಮುಂಬೈನ ಪಂ. ಅಜಿತ್ ಕಡಕಡೆ ಹಾಗೂ ಸಂಗಡಿಗರು ಸಂಗೀತ ಸುಧೆ ಹರಿಸುವರು ಎಂದರು.

ಹುಬ್ಬಳ್ಳಿ ಅರ್ಬನ್ ಬ್ಯಾಂಕ್ ಚೇರ್ಮನ್ ವಿಕ್ರಮ ಶಿರೂರ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮಕ್ಕೆ ಧನ್ಯೋಸ್ಮಿ ಯೋಗಕೇಂದ್ರ ಮತ್ತು ಎಲ್ಲ ಗೋ ಪ್ರೇಮಿ ಸಂಟನೆಗಳು ಸಹಕಾರ ನೀಡಿವೆ. ಕಾರ್ಯಕ್ರಮದ ಸ್ಥಳದಲ್ಲಿ ಗವ್ಯೋತ್ಪನ್ನ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಪ್ರಸಾದ ವಿವರಿಸಿದರು.

ಡಾ. ವಿಜಯಕುಮಾರ ಮಠ, ದತ್ತಾತ್ರೇಯ ಭಟ್ಟ, ಸುಬ್ರಮಣ್ಯ ಶಿರಕೋಳ, ಇತರರು ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net