ಬತ್ತುತ್ತಿದೆ ಪಂಚಗಂಗಾವಳಿ

panchagangavali
ಬತ್ತಿ ಹೋಗುತ್ತಿರುವ ಪಂಚಗಂಗಾವಳಿ ನದಿ.
Published on

ರಾಘವೇಂದ್ರ ಪೈ ಗಂಗೊಳ್ಳಿ

ಬತ್ತಿ ಹೋಗುತ್ತಿದೆ ಕುಂದಾಪುರ ಜನರ ಜೀವನಾಡಿ ನದಿ.. ಹೂಳು ತುಂಬಿ ಮರಳಿನ ದಿಬ್ಬಗಳ ರಚನೆ.. ಆತಂಕದಲ್ಲಿ ಜನಪಾತ್ರದ ಜನರು.. ಇದು ಪಂಚಗಂಗಾವಳಿ ನದಿಯ ವ್ಯಥೆಯ ಕಥೆ...

ಸಾವಿರಾರು ಜನರ ಜೀವನಾಡಿಯಾಗಿರುವ ಪಂಚಗಂಗಾವಳಿ ನದಿಯ ನೀರಿನ ಮಟ್ಟ ಗಣನೀಯ ಇಳಿಕೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ನದಿಯಲ್ಲಿ ಹೂಳು ತುಂಬಿ ಕಳಾಹೀನವಾಗಿದೆ. ದಿನದಿಂದ ದಿನಕ್ಕೆ ಪಂಚಗಂಗಾವಳಿ ನದಿ ಬತ್ತಿ ಹೋಗುತ್ತಿದ್ದು, ಇದರಿಂದ ನದಿಪಾತ್ರದ ಗ್ರಾಮಗಳು ಹಾಗೂ ಈ ನದಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ನೂರಾರು ಕುಟುಂಬಗಳ ಮೇಲೆ ಇದು ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಪಂಚಗಂಗಾವಳಿ ನದಿ ಗಂಗೊಳ್ಳಿ ಕುಂದಾಪುರದ ನಡುವೆ 1 ಕಿ.ಮೀ.ನಷ್ಟು ಅಗಲವಾಗಿದೆ. 1,500 ಮೀ. ವಿಸ್ತಾರದ ಪ್ರದೇಶ ಸಂಪೂರ್ಣ ಹೂಳು ತುಂಬಿ ಹೋಗಿದೆ. ಸೌಪರ್ಣಿಕಾ, ವಾರಾಹಿ, ಚಕ್ರಾ, ಕುಬ್ಜಾ ಮತ್ತು ಖೇಟ ಈ ಐದು ಪ್ರಮುಖ ನದಿಗಳಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿರುವುದು ಪಂಚಗಂಗಾವಳಿ ನದಿ ಬತ್ತಲು ಪ್ರಮುಖ ಕಾರಣ. ನದಿಯ ಹೂಳೆತ್ತಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದಿರುವುದು ಕೂಡ ಕಾರಣ ಎನ್ನಲಾಗುತ್ತಿದೆ. ಪ್ರವಾಸೋದ್ಯಮಕ್ಕೆ ಬಹಳ ಪ್ರಾಶಸ್ತ್ಯವಾಗಿದ್ದ ಈ ಸ್ಥಳ ಸಂಪೂರ್ಣ ನಿರ್ಲಕ್ಷೃಕ್ಕೊಳಗಾಗಿದೆ. ಕುಂದಾಪುರದ ಈ ಕೇಂದ್ರ ಸ್ಥಳದಲ್ಲಿ ಬಹಳಷ್ಟು ಯೋಜನೆಗಳ ಅನುಷ್ಠಾನದ ಬೇಡಿಕೆ ಇಟ್ಟಿದ್ದರೂ ಯಾವುದು ಕಾರ್ಯಗತವಾಗಿಲ್ಲ. ಪ್ರಮುಖವಾಗಿರುವ ಹೂಳೆತ್ತುವ ಕಾರ್ಯದ ಬಗ್ಗೆಯೇ ಸರ್ಕಾರ, ಜಿಲ್ಲಾಡಳಿತ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ಈ ಭಾಗದ ಜನರ ಜೀವನಾಡಿಯಾಗಿರುವ ಪಂಚಗಂಗಾವಳಿ ನದಿ ಉಳಿವಿಗಾಗಿ ಗಂಭೀರ ಚಿಂತನೆ ನಡೆಸಬೇಕು. ಸೂಕ್ತ ಯೋಜನೆ ರೂಪಿಸಿ ನದಿಯ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಸಂಶೋಧಕರಿಂದ ಮಾಹಿತಿ ಸಂಗ್ರಹ

ಪಂಚಗಂಗಾವಳಿ ಇತಿಹಾಸ ಕಾಪಾಡಲು ಇತಿಹಾಸ ಸಂಶೋಧಕರು ಮಾಹಿತಿ ಸಂಗ್ರಹಿಸಿದ್ದಾರೆ. ನದಿ ಬತ್ತುತ್ತಿರುವುದರಿಂದ ಜನಜೀವನದ ಮೇಲೆ ಆಗುತ್ತಿರುವ ಸಮಸ್ಯೆ ಮತ್ತು ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ತಲೆಕೆಡಿಸಿಕೊಳ್ಳದಿರುವುದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಕುಂದಾಪುರ ಜನರ ಜೀವನಾಡಿಯಾಗಿರುವ ಪಂಚಗಂಗಾವಳಿ ನದಿ ಬತ್ತಿ ಹೋಗುತ್ತಿದ್ದು, ನದಿಯಲ್ಲಿ ಹೂಳು ತುಂಬಿಕೊಂಡು ಮರಳಿನ ದಿಬ್ಬಗಳ ಉಂಟಾಗಿದೆ. ಇದು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವಾಗ ಸಮಸ್ಯೆ ಪರಿಹರಿಸಲು ಗಂಭೀರ ಪ್ರಯತ್ನ ಮಾಡಬೇಕು. ಯು.ಎಸ್.ಶೆಣೈ ರಾಜ್ಯ ಪತ್ರಿಕಾ ಅಕಾಡೆಮಿ ಸದಸ್ಯ, ಕುಂದಾಪುರ ಈ ಬಾರಿಯ ಬಜೆಟ್‌ನಲ್ಲಿ ಪಂಚಗಂಗಾವಳಿ ನದಿ ಹೂಳೆತ್ತುವ ಕಾರ್ಯ ಹಾಗೂ ಈ ಭಾಗದ ಪರಿಸರ ಅಭಿವೃದ್ಧಿಗೆ ಹಣ ಮೀಸಲಿಡಲು ಶಾಸಕರು, ಉಸ್ತುವಾರಿ ಸಚಿವರು, ಮೀನುಗಾರಿಕೆ ಇಲಾಖೆ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗೆ ಮನವರಿಕೆ ಮಾಡಬೇಕು. ಈ ಜ್ವಲಂತ ಸಮಸ್ಯೆ ಶೀಘ್ರ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಬಿ.ಅಪ್ಪಣ್ಣ ಹೆಗ್ಡೆ, ಮಾಜಿ ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net