

ಉಡುಪಿ: ಜಿಲ್ಲೆಯಲ್ಲಿ 154 ಗ್ರಾಪಂಗಳ 866 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 3,82,528 ಪುರುಷ ಮತ್ತು 4,12,335 ಮಹಿಳೆಯರು ಮತ್ತು 9 ಇತರೆ ಮತದಾರರು ಸೇರಿ ಒಟ್ಟು 7,94,872 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸುವ ಅವಕಾಶ ಪಡೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಪಂ ಸಾರ್ವತ್ರಿಕ ಚುನಾವಣೆ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಿ.22ರಂದು ನಡೆಯುವ ಮೊದಲನೇ ಹಂತದಲ್ಲಿ ಉಡುಪಿ, ಹೆಬ್ರಿ, ಬೈಂದೂರು ಮತ್ತು ಬ್ರಹ್ಮಾವರ ವ್ಯಾಪ್ತಿಯ 67 ಗ್ರಾಮ ಪಂಚಾಯಿತಿಗಳ 415 ಕ್ಷೇತ್ರಗಳಿಗೆ ಒಟ್ಟು 553 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 3,77,308 ಮಂದಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. 27ರಂದು ನಡೆಯುವ ಎರಡನೇ ಹಂತದಲ್ಲಿ ಕುಂದಾಪುರ, ಕಾರ್ಕಳ ಮತ್ತು ಕಾಪು ವ್ಯಾಪ್ತಿಯ 87 ಗ್ರಾಪಂಗಳ 451 ಕ್ಷೇತ್ರಗಳಿಗೆ ಒಟ್ಟು 576 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 7,94,872 ಮಂದಿ ಮತ ಚಲಾಯಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ವರದಿಗೆ ಸೂಚನೆ
ಮತಗಟ್ಟೆಗಳಲ್ಲಿ ಮೂಲಸೌಕರ್ಯಗಳು ಇರುವ ಬಗ್ಗೆ ತಹಸೀಲ್ದಾರ್‌ಗಳು ಪರಿಶೀಲಿಸಿ ವರದಿ ನೀಡಿ, ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಕೋವಿಡ್ ಸುರಕ್ಷಾ ಕ್ರಮಗಳೊಂದಿಗೆ ಚುನಾವಣೆ ನಡೆಸುವಂತೆ ತಿಳಿಸಿದರು. ಚುನಾವಣಾ ಕಾರ್ಯಕ್ಕಾಗಿ 155 ಚುನಾವಣಾಧಿಕಾರಿ ಮತ್ತು 166 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಗ್ರಾಪಂ ಚುನಾವಣೆ ಪಕ್ಷ ರಹಿತವಾಗಿ ನಡೆಯಲಿದ್ದು, ಗ್ರಾಮಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳ ಪ್ರಚಾರ ಫಲಕ, ಕಟೌಟ್ ಇದ್ದಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವತಿಯಿಂದ ತಕ್ಷಣವೇ ತೆಗೆಯಬೇಕು, ತಪ್ಪಿದಲ್ಲಿ ಆಯಾ ಗ್ರಾಮ ಪಂಚಾಯಿತಿ ಪಿಡಿಒಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಬೆಂಬಲಿಗ ಎಂದು ಜಾಹೀರಾತು ನೀಡುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಲಿದೆ. ಅಂತಹ ವ್ಯಕ್ತಿಗಳ ವಿರುದ್ಧ್ದ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.
ಜಿಪಂ ಸಿಇಒ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಉಪಸ್ಥಿತರಿದ್ದರು.