

ಕುಶಾಲನಗರ:
ಪ್ರತೀ ಮನೆಯಿಂದಲೂ ಮಾಸಿಕ ನೂರು ರೂ. ನೀರಿನ ಕಂದಾಯ ವಸೂಲು ಮಾಡುವ ಬಗ್ಗೆ ಶನಿವಾರ ನಡೆದ ಕೂಡುಮಂಗಳೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಈ ಬಗ್ಗೆ ಸಭೆಯಲ್ಲಿ ವಿಷಯ ಮಂಡಿಸಿದಾಗ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಅಂತಿಮವಾಗಿ ನೂರು ರೂ. ನೀರಿನ ಕಂದಾಯ ಸಂಗ್ರಹಿಸುವ ತೀರ್ಮಾನ ಕೈಗೊಳ್ಳಲಾಯಿತು.
ಪಂಚಾಯತಿ ವ್ಯಾಪ್ತಿಯಲ್ಲಿ ಇನ್ನೂ ಅನೇಕರು ಕುಡಿವ ನೀರಿನ ಸಂಪರ್ಕವಿಲ್ಲದೇ ಪರಿತಪಿಸುತ್ತಿದ್ದಾರೆ. ಹಾಗಾಗಿ ಕುಡಿವ ನೀರು ಒದಗಿಸಬೇಕು ಎಂದು ಚಿಕ್ಕತ್ತೂರು ಸದಸ್ಯ ದಿನೇಶ್ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಸರ್ಕಾರಿ ಹಾಗೂ ಪೈಸಾರಿ ಜಾಗದಲ್ಲಿ ಅಕ್ರಮವಾಗಿ ಮನೆಕಟ್ಟುವುದನ್ನು ತಡೆಯುವ ಉದ್ದೇಶದಿಂದ ಅಕ್ರಮವಾಗಿ ವಾಸವಿರುವವರಿಗೆ ನೀರು ಹಾಗೂ ವಿದ್ಯುತ್ ಸೌಕರ್ಯ ಒದಗಿಸದಂತೆ ಸುಪ್ರಿಂ ಕೋರ್ಟ್ ನಿರ್ದೇಶನ ನೀಡಿರುವುದಾಗಿ ಪಿಡಿಒ ಸಂತೋಷ್ ಸಭೆಯ ಗಮನಕ್ಕೆ ತಂದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸಕ್ತ 3114 ಕುಡಿವ ನೀರಿನ ಸಂಪರ್ಕಗಳಿದ್ದು ಈಗ ಇರುವ ಮಾಸಿಕ ರೂ.50 ರೂ.ನಂತೆ, ವಾರ್ಷಿಕ 10 ಲಕ್ಷ ರೂ. ನೀರಿನ ಕರ ವಸೂಲಿಯಾಗುತ್ತಿದೆ. ಶುದ್ಧ ನೀರನ್ನು ಹರಿಸುವ ಮೂಲಕ ಸ್ವಚ್ಚತೆ ಕಾಪಾಡಬೇಕಿರುವ ಕಾರಣ ಇನ್ನು ಮುಂದೆ ಮಾಸಿಕ 100 ರೂ. ನಿಗದಿ ಮಾಡಲಾಗುತ್ತಿದೆ. ಹಾಗೆಯೇ ರಾಜ್ಯ ಹೆದ್ದಾರಿ ಬದಿಯಲ್ಲಿ ಕಟ್ಟಡ ಕಟ್ಟುವವರು ಹೆದ್ದಾರಿಯ ಮಧ್ಯ ಭಾಗದಿಂದ 18 ಮೀಟರ್ ಬಿಟ್ಟು ಕಟ್ಟಡ ಕಟ್ಟಬೇಕು.
ಜಲಜೀವನ್ ಯೋಜನೆಯಡಿ ನೀರಿನ ಸಂಪರ್ಕ ಪಡೆದಿರುವ ಬಹುತೇಕ ಮಂದಿ ನೀರನ್ನು ಕುಡಿಯಲು ಬಳಸುತ್ತಿಲ್ಲ. ಅವರ ಮನೆಯಂಗಳ ಹಾಗೂ ತೋಟಗಳಿಗೆ ಹರಿಸುತ್ತಿದ್ದಾರೆ. ಈ ಬಗ್ಗೆ ಕ್ರಮವಾಗಬೇಕು ಎಂದು ಪಂಚಾಯಿತಿ ಹಿರಿಯ ಸದಸ್ಯೆ ಫಿಲೋಮಿನಾ ಸಭೆಯಲ್ಲಿ ಒತ್ತಾಯಿಸಿದರಲ್ಲದೇ, ಮಳೆಗಾಲದಲ್ಲಿ ಮನೆಗಳಿಗೆ ಅಶುದ್ಧವಾದ ಕಲುಷಿತ ನೀರನ್ನು ಹರಿಸಲಾಗುತ್ತಿದೆ. ಈ ಬಗ್ಗೆ ಗಮನವಹಿಸಿ ಎಂದರು.
ಸುಂದರ ನಗರ ವ್ಯಾಪ್ತಿಯಲ್ಲಿ ಇರುವ ಮಾಂಸದ ಅಂಗಡಿಯಲ್ಲಿ ಸ್ವಚ್ಛತೆ ಹಾಗೂ ಶುದ್ಧತೆ ನಿರ್ವಹಿಸುತ್ತಿಲ್ಲ. ತೂಗು ಹಾಕಿದ ಪ್ರಾಣಿಗಳ ಕಳೇಬರದ ಮೇಲೆ ನೊಣಗಳು ಹಾಗೂ ಮಾರಕ ಸೊಳ್ಳೆಗಳು ಕುಳಿತು ಗುಯ್ ಎನ್ನುತ್ತಿವೆ. ಪಂಚಾಯತಿ ಅಧಿಕಾರಿಗಳು ಏನು ಮಾಡುತ್ತಿದ್ದೀರಿ ? ಸಾರ್ವಜನಿಕರು ಹಣ ಕೊಟ್ಟು ಸಾಂಕ್ರಾಮಿಕ ರೋಗಗಳನ್ನು ಮನೆಗೆ ಬರಮಾಡಿಕೊಳ್ಳಬೇಕಾ ? ಎಂದು ಸದಸ್ಯ ದಿನೇಶ್ ಈ ಸಂದರ್ಭ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಸೂಕ್ತ ಕ್ರಮ ತೆಗದುಕೊಳ್ಳುವುದಾಗಿ ಪಿಡಿಒ ಹೇಳಿದರು.
ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಕೆ.ಕೆ. ಬೋಗಪ್ಪ, ಪಾರ್ವತಮ್ಮ ರಾಮೇಗೌಡ, ಭಾಗ್ಯ, ಖತೀಜ, ಶಂಷುದ್ದೀನ್, ಗೌರಮ್ಮ, ಚೈತ್ರ, ಗಿರೀಶ, ಸುರೇಶ, ಮಣಿಕಂಠ ಇದ್ದರು.