ಗುಡ್ಡೆಹೊಸೂರು ಪಂಚಾಯಿತಿಗೆ ಕೇಂದ್ರ ತಂಡ ಭೇಟಿ

panchayath
Published on

ಕುಶಾಲನಗರ:

ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಕುರಿತು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ರಾಷ್ಟ್ರಮಟ್ಟದ ಉಸ್ತುವಾರಿ ಪರಿಶೀಲನಾ ತಂಡ ಮಂಗಳವಾರ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಿತು.

ರಾಷ್ಟ್ರೀಯ ಪರಿಶೀಲನಾ ತಂಡದ ಸದಸ್ಯರುಗಳಾದ ಶುಭಂ ಲಕ್ಷ್ಮಣ್ ತಾವೇ ಹಾಗೂ ರವಿರತ ರಾಮ್ರಾವ್ ಷಟ್ಕೆ ಇವರುಗಳು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಫಲಾನುಭವಿಗಳೊಂದಿಗೆ ಸಮಾಲೋಚನೆ ನಡೆಸಿದರು. ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ಪಿಂಚಣಿ, ವಿಶೇಷ ಚೇತನರ ಪಿಂಚಣಿ ಸಕಾಲಕ್ಕೆ ತಲುಪುತ್ತಿರುವ ಬಗ್ಗೆ ಖಾತರಿಪಡಿಸಿಕೊಂಡರು.

ಎನ್‌ಆರ್‌ಎಲ್‌ಎಂ ಅಡಿಯಲ್ಲಿ ವಿವಿಧ ಸ್ವಸಹಾಯ ಸಂಘಗಳು ಕೈಗೊಂಡಿರುವ ವಿನೂತನ ಕಾರ್ಯ ಚಟುವಟಿಕೆಗಳ ಬಗೆ ಮಾಹಿತಿ ಪಡೆದುಕೊಂಡರು. ಮಹಿಳಾ ಸ್ವ ಸಹಾಯ ಗುಂಪುಗಳನ್ನು ಕ್ರಿಯಾತ್ಮಕವಾಗಿ ಬಳಸಿಕೊಳ್ಳಲು ಬಹಳಷ್ಟು ಅವಕಾಶಗಳಿದ್ದು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ನೋಂದಾಯಿತ ಕೂಲಿ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದ ತಂಡ ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿತು.

ಪರಿಶೀಲನಾ ತಂಡದೊAದಿಗೆ ಸೋಮವಾರಪೇಟೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಹಾಗೂ ಸಹಾಯಕ ನಿರ್ದೇಶಕರಾದ ಶ್ರೀನಿವಾಸ್ ಮತ್ತು ರಾಕೇಶ್ ಹಾಜರಿದ್ದರು.

ಈ ಸಂದರ್ಭ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಪ್ರವೀಣ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ.ಆರ್. ಸುಮೇಶ್ ಹಾಗೂ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ಸದಸ್ಯರುಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net