

ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯತಿ ಮಾಸಿಕ ಸಭೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ಬಗ್ಗೆ ಮತ್ತು ಶೇ 25 ರ ಅನುದಾನದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಮನೆಗಳಿಗೆ ಅನುಕೂಲವಾಗುವಂತೆ ಪ್ಲಾಸ್ಟಿಕ್ ಹೊದಿಕೆಯನ್ನು ನೀಡುವ ಬಗ್ಗೆ, ಶುಚಿತ್ವಕ್ಕೆ ಹೆಚ್ಚಿನ ಅದ್ಯತೆ ನೀಡುವುದರ ಜತೆಯಲ್ಲಿ ಎಲ್ಲಾ ವಾರ್ಡ್ಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು ಮಾಡುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಹಾಜರಿದ್ದ ಸದಸ್ಯರು ಸಭೆಯಲ್ಲಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತಾಡಿದ ಅಧ್ಯಕ್ಷ ಕೆ.ಟಿ. ಗಿರೀಶ್ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಸಮಗ್ರವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲಾಗುವುದು. 15ನೇ ಹಣಕಾಸು ಯೋಜನೆಯ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕ್ರಮಕ್ಕೆ ಮುಂದಾಗಲಾಗುವುದು ಎಂದರು.
ಅಭಿವೃದ್ಧಿ ಅಧಿಕಾರಿ ಮಂಜಳಾ ಸಭೆಗೆ ಸರ್ಕಾರದ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಟಿ. ಪಿ. ಹಮೀದ್, ಮಂಗಳ, ಮೋಹಿನಿ, ಅರುಣ್ ರಾವ್, ಕೆ.ಎಸ್. ಶಿವಕುಮಾರ್, ಅನಂತ, ವಾಣಿ, ಹೆಚ್.ಎಸ್. ರವಿ, ರತ್ನಮ್ಮ, ಪಲ್ಲವಿ, ಲಕ್ಷಿ, ಚಂದ್ರು, ಜಯಶೀಲಾ. ಕಾರ್ಯದರ್ಶಿ ಪುನೀತ್ ಇದ್ದರು.