

ಹಲಗೂರು: ಪ್ರಸಿದ್ಧ ಪ್ರೇಕ್ಷಣೀಯ ಹಾಗೂ ಪುಣ್ಯಕ್ಷೇತ್ರ ಮುತ್ತತ್ತಿಯಲ್ಲಿ ನೆಲೆಸಿರುವ ಮುತ್ತತ್ತಿರಾಯನ ಸನ್ನಿಧಿಯಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನ, ವರನಟ ಡಾ.ರಾಜಕುಮಾರ್ ಜನ್ಮ ದಿನಾಚರಣೆ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.
ಮುತ್ತತ್ತಿ ಗ್ರಾಮದ ಡಾ.ರಾಜಕುಮಾರ್ ಸಮುದಾಯ ಭವನದಲ್ಲಿ ಕೇಕ್ ಕತ್ತರಿಸುವ ಮೂಲಕ ಡಾ.ರಾಜ್ ಕುಮಾರ್ ಅವರ 97ನೇ ಹುಟ್ಟು ಹಬ್ಬ, ಪಂಚಾಯತ್ ರಾಜ್ ದಿನವನ್ನು ಆಚರಿಸಲಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಜಿ.ಶ್ರೀನಿವಾಸ್ ಮಾತನಾಡಿ, 1993ರಲ್ಲಿ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ ಜಾರಿಯಾಗಿ 32 ವರ್ಷಗಳಾಗಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಸೌಕರ್ಯಗಳನ್ನು ಒದಗಿಸಲು ಅನುಕೂಲವಾಗಿದೆ ಎಂದು ಹೇಳಿದರು.
ಬಳಿಕ ದೇವಸ್ಥಾನದ ಆವರಣದ ಅಂಗಡಿಗಳಿಗೆ ಭೇಟಿ ನೀಡಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ಲಾಸ್ಟಿಕ್ ನೀಡಬಾರದು. ಅವರಿಗೆ ತಿಳಿವಳಿಕೆ ನೀಡಬೇಕು ಮತ್ತು ಕಸವನ್ನು ಕಸದ ಬುಟ್ಟಿಯಲ್ಲೇ ಹಾಕಬೇಕು, ಎಲ್ಲೆಂದರಲ್ಲಿ ಬಿಸಾಡಬೇಡಿ, ಪ್ಲಾಸ್ಟಿಕ್ ಮುಕ್ತ ಮಾಡಲು ಸಹಕರಿಸಿ ಎಂದು ಮನವಿ ಮಾಡಿದರು.
ಮುತ್ತತ್ತಿ ದೇವಸ್ಥಾನದ ಆವರಣದಿಂದ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಲಾಯಿತು. ಪಿಡಿಒ ಮಲ್ಲಿಕಾರ್ಜುನ್, ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಸುನೀಲ್ ಕುಮಾರ್, ಕಾರ್ಯದರ್ಶಿ ಕಾಳರಾಜು, ಮಂಜುನಾಥ್, ನಿಂಗರಾಜು, ಸಂತೋಷ್ ಕುಮಾರ್ ಇತರರು ಇದ್ದರು.