ಗ್ರಾಪಂ ಸದಸ್ಯರ ಸಮಸ್ಯೆ ಅಧಿವೇಶನದಲ್ಲಿ ಪ್ರಸ್ತಾಪ : ಶಾಸಕಿ ಭಾಗೀರಥಿ ಮುರುಳ್ಯ ಭರವಸೆ

New Project (17)
Published on

ಸುಳ್ಯ: ಗ್ರಾಮ ಪಂಚಾಯಿತಿ ಸದಸ್ಯರ ಸಮಸ್ಯೆ, ನರೇಗಾ ಯೋಜನೆ ಅನುಷ್ಠಾನ ಹಾಗೂ ಸರ್ಕಾರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಹಾದಿಯಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ಜನರಿಗೆ ಯೋಜನೆಯ ಫಲ ಸಿಗಲು ಸಮಸ್ಯೆ ಬಗೆಹರಿಸಬೇಕಾದುದು ಅನಿವಾರ್ಯವಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಸುಳ್ಯ ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರ ಮಹಾಒಕ್ಕೂಟ ಬುಧವಾರ ತಾ.ಪಂ ಸಭಾಂಗಣದಲ್ಲಿ ಆಯೋಜಿಸಿದ ಪಂಚಾಯತ್ ರಾಜ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಗ್ರಾ.ಪಂ. ಎದುರಿಸುತ್ತಿರುವ ನರೇಗಾದ ಸಮಸ್ಯೆಗಳು ಮತ್ತು ಗ್ರಾ.ಪಂ.ಗಳ ಸಿಬ್ಬಂದಿ ಕೊರತೆ ಬಗ್ಗೆ ಅರಂತೋಡು ಗ್ರಾ.ಪಂ.ಅಧ್ಯಕ್ಷ ಹಾಗೂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೇಶವ ಅಡ್ತಲೆ ವಿಷಯ ಮಂಡಿಸಿ ನರೇಗಾದಲ್ಲಿ ಅವೈಜ್ಞಾನಿಕವಾಗಿ ಗುರಿ ನೀಡಲಾಗುತ್ತದೆ. ಮಾನವ ದಿನಗಳ ಸೃಜನೆಯ ತರಾತುರಿಯಲ್ಲಿ ಯೋಜನೆಯ ನಿಯಮ ಪಾಲಿಸುವುದು ಕಷ್ಟಕರವಾಗಿದೆ. 15ನೇ ಹಣಕಾಸಿನ ಯೋಜನೆಯ ಮತ್ತು ನರೇಗಾ ಯೋಜನೆಗಳ ಕಾಮಗಾರಿಗಳ ಶೆಡ್ಯೂಲ್ ಬೇರೆಯಾಗಿರುವುದರಿಂದ ಎರಡು ಯೋಜನೆಗಳ ಒಗ್ಗೂಡಿಸುವಿಕೆಯಲ್ಲಿ ಕಾಮಗಾರಿ ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.

ಸುಳ್ಯ ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರ ಮಹಾಒಕ್ಕೂಟದ ಜಿಲ್ಲಾ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಸಂಚಾಲಕ ಮಹೇಶ್ ಕುಮಾರ್ ಕರಿಕ್ಕಳ, ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಉಬರಡ್ಕ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಸೂಂತೋಡು ಮೊದಲಾದವರು ವಿವಿಧ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

ಸುಳ್ಯ ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರ ಮಹಾಒಕ್ಕೂಟದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ದ.ಕ.ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಶುಭಾಶ್ಚಂದ್ರ ಕೊಲ್ನಾಡು ಅತಿಥಿಗಳಾಗಿದ್ದರು. ಲೀಲಾವತಿ ಅಂಜೇರಿ ಪ್ರಾರ್ಥಿಸಿದರು. ಒಕ್ಕೂಟದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net