

ತುಮಕೂರು: ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರಕ್ಕೆ ತುಮಕೂರು ತಾಪಂ ಹಾಗೂ ನಾಗವಲ್ಲಿ ಗ್ರಾಪಂ ಆಯ್ಕೆಯಾಗಿವೆ.
ಕೇಂದ್ರ ಸರ್ಕಾರ ಪಂಚಾಯತ್ ಸಂಸ್ಥೆಗಳಿಗೆ ನೀಡುವ 2018-19ನೇ ಸಾಲಿನ ಕಾರ್ಯಗಳಿಗೆ ಸಂಬಂಧಿಸಿದಂತೆ 2019-20ನೇ ಸಾಲಿನಲ್ಲಿ ನೀಡುವ ತಾಪಂ ವಿಭಾಗದಲ್ಲಿ ತುಮಕೂರು ಹಾಗೂ ಗ್ರಾಪಂ ವಿಭಾಗದಲ್ಲಿ ನಾಗವಲ್ಲಿ ಆಯ್ಕೆಯಾಗಿವೆ. ರಾಜ್ಯಕ್ಕೆ ಸಂಬಂಧಿಸಿದಂತೆ ಒಂದು ಜಿಪಂ, ಎರಡು ತಾಪಂ ಹಾಗೂ ಮೂರು ಗ್ರಾಪಂಗಳನ್ನು ಆಯ್ಕೆ ಮಾಡಿ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸದಂದು ಪುರಸ್ಕರಿಸಲಾಗುತ್ತಿತ್ತು. ಈ ವರ್ಷ ಕರೊನಾ ಕಾರಣದಿಂದಾಗಿ ಪ್ರಶಸ್ತಿಗಳನ್ನು ತಡವಾಗಿ ಪ್ರಕಟಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಅಧಿನಿಯಮ 1993 ಅನ್ವಯ ತನ್ನ ಕರ್ತವ್ಯಗಳನ್ನು ಉತ್ತಮವಾಗಿ ನಿರ್ವಹಿಸಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬಿಡುಗಡೆಯಾಗುವ ಅನುದಾನವನ್ನು ಯೋಜನೆಗಳ ಮಾರ್ಗಸೂಚಿ ಅನ್ವಯ ವಿನಿಯೋಗಿಸಿರುತ್ತಾರೆ. ಪಂಚಾಯಿತಿಗಳ ಚುನಾಯಿತ ಸದಸ್ಯರು ಹಾಗೂ ಸಿಬ್ಬಂದಿ ವರ್ಗದ ಶ್ರಮದ ಪ್ರತಿಫಲವಾಗಿ ಪ್ರಶಸ್ತಿ ಲಭಿಸಿದ್ದು ಇತರ ಗ್ರಾಪಂಗಳಿಗೆ ಮಾದರಿಯಾಗಿದೆ ಎಂದು ತುಮಕೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಡಿ.ಜೈಪಾಲ್ ಅಭಿಪ್ರಾಯಪಟ್ಟಿದ್ದಾರೆ.
ವಿಶೇಷ ನಗದು ಬಹುಮಾನ : ಗ್ರಾಮೀಣ ಭಾಗದಲ್ಲಿ ಉತ್ತಮ ಕೆಲಸ ಮಾಡಿ ಮಾದರಿಯಾದ ಗ್ರಾಪಂಗಳಿಗೆ ನೀಡಲಾಗುವ ‘ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರ್’ ಪ್ರಶಸ್ತಿಗೆ ರಾಜ್ಯದ ತುಮಕೂರು ತಾಪಂ ಹಾಗೂ ಮೈಸೂರು ಜಿಲ್ಲೆಯ ಹುಣಸೂರು ತಾಪಂ ಆಯ್ಕೆಯಾಗಿದೆ. ಅದೇ ರೀತಿ ಗ್ರಾಪಂ ವಿಭಾಗದಲ್ಲಿ ತುಮಕೂರು ತಾಲೂಕು ನಾಗವಲ್ಲಿ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಅನ್ನೂರು ಹಾಗೂ ಮೈಸೂರು ಜಿಲ್ಲೆ ಹುಣಸೂರು ತಾಲೂಕು ಹುಸೇನ್‌ಪುರ ಗ್ರಾಪಂ ಆಯ್ಕೆಯಾಗಿದೆ. ಪ್ರಶಸ್ತಿ ಪಡೆದ ತಾಪಂ ಹಾಗೂ ಗ್ರಾಪಂಗೆ ವಿಶೇಷ ನಗದು ಬಹುಮಾನ ಕೇಂದ್ರ ಬರಲಿದ್ದು, ಪುರಸ್ಕೃತ ಗ್ರಾಪಂಗಳಿಗೆ ಸಮನಾಗಿ ಹಂಚಲಾಗುತ್ತದೆ.
ರಾಷ್ಟ್ರಮಟ್ಟದ ಪುರಸ್ಕಾರ ಲಭಿಸಿರುವುದು ಸಹಜವಾಗಿಯೇ ಖುಷಿ ತಂದಿದೆ. ಈ ಸಾಧನೆಗೆ ಜನಪ್ರತಿನಿಧಿಗಳು, ಸಿಬ್ಬಂದಿ, ಸ್ಥಳೀಯ ನಾಗರಿಕರ ಸಹಕಾರ ಹಾಗೂ ಅಧಿಕಾರಿಗಳ ಮಾರ್ಗದರ್ಶನ ಕಾರಣ. ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಲು ಪ್ರೇರೇಪಿಸಿದೆ. ರವಿಕುಮಾರ್ ಪಿಡಿಒ, ನಾಗವಲ್ಲಿ ಗ್ರಾಪಂ