ಸರ್ಕಾರಿ ಕಟ್ಟಡ ಖಾಸಗಿ ವ್ಯಕ್ತಿಗೆ ಖಾತೆ!

kona
ದೊಡ್ಡಬಳ್ಳಾಪುರದ ಕೊನಘಟ್ಟ ಗ್ರಾಪಂ ಜಾಗ ಖಾಸಗಿ ವ್ಯಕ್ತಿಯ ಹೆಸರಲ್ಲಿ ಖಾತೆ ಆಗಿರುವುದನ್ನ ಖಂಡಿಸಿ ಗ್ರಾಮಸ್ಥರು, ಸದಸ್ಯರು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಬಾಲರಾಜು, ಮಂಜುನಾಥ ಗ್ರಾಮಸ್ಥರಾದ ಪುನೀತ್ ಕುಮಾರ್, ನಾಗೇಶ್, ನಂಜೇಗೌಡ, ಶ್ರೀನಿವಾಸ್ ಶೆಟ್ಟಿ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಿವೇಶನಗಳ ಖಾತೆ ಮಾಡುವ ಅಧಿಕಾರ ಗ್ರಾಮ ಪಂಚಾಯಿತಿಗೆ ಇದೆ, ಅಂತಹ ಗ್ರಾಮ ಪಂಚಾಯಿತಿ ಸರ್ಕಾರಿ ಕಟ್ಟಡದ ಜಾಗವೇ ಖಾಸಗಿ ವ್ಯಕ್ತಿಗೆ ಖಾತೆಯಾಗಿದೆ!
ಹೌದು. ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮ ಪಂಚಾಯತಿಯಲ್ಲಿ ಇಂಥಹದೊಂದು ಪ್ರಕರಣ ನಡೆದಿದ್ದು ಭಾರಿ ಸುದ್ದಿಯಾಗಿದೆ. ಸದ್ಯ ಕೊನಘಟ್ಟ ಗ್ರಾಮ ಪಂಚಾಯಿತಿ ಜಾಗ ಬೇರೆಯವರ ಹೆಸರಲ್ಲಿದ್ದು, ಪಂಚಾಯಿತಿ ಕಟ್ಟಡದ ಮಾಲೀಕತ್ವ ಖಾಸಗಿ ವ್ಯಕ್ತಿಯ ಪಾಲಾಗಿದೆ, ಪಂಚಾಯಿತಿ ಕಟ್ಟಡದ ಜಾಗ ಉಳಿಸಿಕೊಳ್ಳಲು ಗ್ರಾಮಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ.
ತ್ರಿಶಂಕು ಸ್ಥಿತಿಯಲ್ಲಿ ಕೊನಘಟ್ಟ ಗ್ರಾಪಂ:
ಕೊನಘಟ್ಟ ಗ್ರಾಮ ಪಂಚಾಯಿತಿ ಕಟ್ಟಡ ಈಗ ತ್ರಿಶಂಕು ಸ್ಥಿತಿಯಲ್ಲಿದೆ.ಕೊನಘಟ್ಟ ಗ್ರಾಮದ ಸರ್ವೆ ನಂಬರ್ 351/2 ಹಾಗೂ 351/3ರ ್ಟ 4 ಗುಂಟೆ ಜಾಗದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡವಿದೆ, ಕಳೆದ 40 ವರ್ಷಗಳಿಂದ ಇದೇ ಜಾಗದಲ್ಲಿ ಪಂಚಾಯಿತಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮ ಪಂಚಾಯಿತಿ ಹೆಸರಲ್ಲಿ 11 ಬಿ ಇ ಖಾತೆ ಹೊಂದಿದೆ. ಆದರೆ ಇದ್ದಕ್ಕಿದಂತೆ 20 ದಿನಗಳ ಹಿಂದೆ ಪಂಚಾಯಿತಿ ಜಾಗ ಬೇರೆಯವರ ಹೆಸರಿಗೆ ಫವತಿ ಖಾತೆಯಾಗಿ ಬದಲಾಗಿದೆ. ಸರ್ವೆ ನಂಬರ್ 351/2 ರಲ್ಲಿ ಇಬ್ಬರು ವ್ಯಕ್ತಿಗಳ ಹೆಸರಿಗೆ ಖಾತೆಯಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾ.ಪಂ ಸದಸ್ಯರು, ಗ್ರಾಮಸ್ಥರಿಂದ ಪ್ರತಿಭಟನೆ:
ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆಯಾಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸೋಮವಾರ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಜಮಾಯಿಸಿದ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ಗ್ರಾಮ ಪಂಚಾಯಿತಿ ಜಾಗ ಬೇರೆಯವರಿಗೆ ಖಾತೆಯಾಗಿರುವುದು ತಿಳಿದ ತಕ್ಷಣವೇ ತುರ್ತು ಸಭೆ ಕರೆಯಲಾಗಿತ್ತು.ಸಭೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಖಾತೆ ಬದಲಾವಣೆಯ ಬಗ್ಗೆ ಯಾವುದೇ ಉತ್ತರ ನೀಡದೆ, ಸಭೆಯ ನಡುವೆ ಎದ್ದು ಹೋಗಿದ್ದರು, ಈ ಬೆಳವಣಿಗೆಗಳನ್ನ ಗಮನಿಸಿ ಖಾತೆ ಬದಲಾವಣೆಯ ಹಿಂದೆ ಕೆಲವರು ಶಾಮೀಲಾಗಿರುವ ಸಂಶಯ ಇದೆ ಅನುಮಾನ ವ್ಯಕ್ತಪಡಿಸಿದರು.
ಆರ್‌ಐ ಇಲ್ಲದೆ ಖಾತೆ ಬದಲಾವಣೆ:
ಯಾವುದೇ ಖಾತೆ ಬದಲಾಣೆ ಮಾಡುವಾಗ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಹಜರು ಮಾಡಿ ಬಳಿಕ ಖಾತೆ ಬದಲಾವಣೆ ಮಾಡಬೇಕು, ಆದರೆ ರೆವೆನ್ಸೂ ಇನ್ಸ್‌ಪೆಕ್ಟರ್ ಆಗಲಿ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಖಾತೆ ಬದಲಾವಣೆ ಮಾಡಿದ್ದಾರೆ, ಗ್ರಾಮ ಪಂಚಾಯಿತಿ ಕಟ್ಟಡ ಜಾಗದ ಖಾತೆ ಬದಲಾವಣೆ ಮಾಡುವಾಗಲೂ ಅಧಿಕಾರಿಗಳು ಅವರ ಸಾಮಾನ್ಯ ಜ್ಞಾನ ಬಳಸದೆ ಇರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಗ್ರಾಮದ ಹಿರಿಯ ಮುಖಂಡ ಕೃಷ್ಣಪ್ಪ ತಿಳಿಸಿದರು.

ಸರ್ವೆ ನಂಬರ್ 351/2 ಮತ್ತು 351/3 ಎರಡರ ಜಾಗದ ಖಾತೆ ಬದಲಾವಣೆ ಮಾಡುವಾಗ ಕಂದಾಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆಯಾಗಿಲ್ಲ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ ಹಾಗೂ ನೋಟಿಸ್ ಸಹ ನೀಡಿರುವುದಿಲ್ಲ, ಯಾವ ದಾಖಲೆಗಳ ಮೇಲೆ ಖಾತೆ ಬದಲಾವಣೆ ಮಾಡಲಾಗಿದೆ ಮತ್ತು ಗ್ರಾಮ ಪಂಚಾಯಿತಿ ಹೆಸರಿಗೆ ಮತ್ತೆ ಪಹಣಿ ಮತ್ತು ಖಾತೆ ಮಾಡಿಕೊಡುವಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ರಷ್ಮಿ ಪಿಡಿಒ, ಕೊನಘಟ್ಟ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net