

ವಿಜಯಪುರ: ಶ್ರೀ ರಾವೇಂದ್ರ ಗುರು ಸಾರ್ವಭೌಮರ 354ನೇ ಆರಾಧನೆ ಪ್ರಯುಕ್ತ ನಗರದ ಬಾಗಲಕೋಟೆ ರಸ್ತೆಯಲ್ಲಿರುವ ನಂಜನಗೂಡು ರಾವೇಂದ್ರಸ್ವಾಮಿ ಮಠದಲ್ಲಿ ಆ.9 ರಿಂದ ಆ. 13 ರ ವರೆಗೆ ಪಂಚರಾತ್ರೋತ್ಸವ ಕಾರ್ಯಕ್ರಮ ಅತ್ಯಂತ ಭಕ್ತಿ ಶ್ರದ್ಧೆಯಿಂದ ನಡೆಯಲಿದೆ.ಆ. 10 ರಿಂದ ಆ. 12 ರ ವರೆಗೆ ಮೂರು ದಿನಗಳವರೆಗೆ ಗುರುಸಾರ್ವಭೌಮರ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ನಡೆಯಲಿದೆ.
ನಿತ್ಯ ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಸಹಿತ 108 ಲೀಟರ್ ಹಾಲಿನಿಂದ ಫಲ ಪಂಚಾಮೃತಾಭಿಷೇಕ ನೆರವೇರಲಿದೆ. ಅಲ್ಲದೆ, ವೇದ ಪಾರಾಯಣ, ಪಂಚಾಮೃತಭಿಷೇಕ, ಕನಕಾಭಿಷೇಕ ಪಾದ ಪೂಜೆ, ಅರ್ಚನೆ, ನೈವೇದ್ಯ, ಅಲಂಕಾರ, ಮಹಾಮಂಗಳಾರತಿ, ಬ್ರಾಹ್ಮಣರ ಅನ್ನ ಸಂತರ್ಪಣೆ, ತೀರ್ಥ ಪ್ರಸಾದ ವಿತರಣೆ, ಸಂಜೆ ಭಜನೆ, ದಾಸವಾಣಿ ದೀವಟಗಿ, ಮಂಗಳಾರತಿ, ರಥೋತ್ಸವ, ಸ್ವಸ್ತಿವಾಚನ ಹಾಗೂ ಮಹಾ ಮಂಗಳಾರತಿ ನಡೆಯಲಿದೆ.
ರಾಯರ ಉತ್ತರಾರಾಧನೆ ಹಿನ್ನೆಲೆಯಲ್ಲಿ ಆ. 12 ರಂದು ಬೆಳಗ್ಗೆ 9 ಗಂಟೆಗೆ ಗುರುಸಾರ್ವಭೌಮರ ರಾಜಬೀದಿಯಲ್ಲಿ ರಥೋತ್ಸವ ನಡೆಯಲಿದೆ. ಆರಾಧಾನೆ ಅಂಗವಾಗಿ ಪ್ರತಿದಿನ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆ.10 ರಂದು ಬೆಂಗಳೂರಿನ ಎನ್. ಶ್ರೀಧರರಾವ್, ಆ. 11 ವಿಜಯಪುರದ ಗೀತಾ ಕುಲಕರ್ಣಿ ಸಂಗಡಿಗರು ಹಾಗೂ ಆ. 12 ರಂದು ರಾಯಚೂರಿನ ಪದ್ಮಶ್ರೀ ಅವರಿಂದ ದಾಸವಾಣಿ ಕಾರ್ಯಕ್ರಮ ನೀಡಲಿದ್ದಾರೆ. ಅಲ್ಲದೆ ರತ್ನಮಾಲಾ ನಾಟ್ಯ ಅಕಾಡೆಮಿ ಪ್ರಸ್ತುತ ಶ್ರೀನಿವಾಸ ಕಲ್ಯಾಣ ಪ್ರದರ್ಶನಗೊಳ್ಳಲಿದೆ.
ಆ. 13 ರಂದು ಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನೆ ಅಂಗವಾಗಿ ಅಷ್ಟೋತ್ತರ ಸಹಿತ ಫಲ ಪಂಚಾಮೃತ ಅಭಿಷೇಕ ನಡೆಯಲಿದೆ ಎಂದು ಶ್ರೀ ಮಠದ ವಿಚಾರಣಾಕರ್ತಾ ಗೋಪಾಲ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.