ಪಂಚರತ್ನ ರಥಯಾತ್ರೆ: 2ನೇ ಹಂತದ ಯಾತ್ರೆಗೆ ಬೀದರ್​ನಲ್ಲಿ ಎಚ್​ಡಿಕೆ​ ಚಾಲನೆ

hdk
Published on

ಬೀದರ್​: ಜೆಡಿಎಸ್​ ಪಂಚರತ್ನ ರಥಯಾತ್ರೆಯ 2ನೇ ಹಂತದ ಯಾತ್ರೆಗೆ ಗಡಿ ಜಿಲ್ಲೆ ಬೀದರ್​ನಲ್ಲಿ ಗುರುವಾರ ಅದ್ದೂರಿ ಚಾಲನೆ ನೀಡಲಾಯಿತು.

ಬೀದರ್ ನಗರದ ಶ್ರೀ ಸಿದ್ಧಾರೂಢ ಮಠದಲ್ಲಿ ಸಿದ್ಧಾರೂಢ ಶ್ರೀಗಳ ಗದ್ದುಗೆಗೆ ಪೂಜೆ ನೆರವೇರಿಸಿ 2ನೇ ಹಂತದ ಯಾತ್ರೆಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರಂಭಿಸಿದರು. ಶಾಸಕ ಬಂಡೆಪ್ಪ ಖಾಶೆಂಪುರ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ ಇತರರಿದ್ದರು.

ಬೀದರ್​ ಜಿಲ್ಲೆಯಲ್ಲಿ ನಾಲ್ಕು ದಿನ ಯಾತ್ರೆ ಸಂಚರಿಸಲಿದ್ದು, ಜಿಲ್ಲೆಯ 6ರ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ತಲಾ ಒಂದೊಂದು ದಿನ ಯಾತ್ರೆ ನಡೆಸಿ, ಕುಮಾರಸ್ವಾಮಿ ವಾಸ್ತವ್ಯ ಮಾಡಲಿದ್ದಾರೆ. ಜ.5ರಂದು ಬೀದರ್ ಉತ್ತರ, 6ರಂದು ಬೀದರ್ ದಕ್ಷಿಣ, 7ಕ್ಕೆ ಹುಮನಾಬಾದ್ ಹಾಗೂ 8ರಂದು ಬಸವಕಲ್ಯಾಣ ಕ್ಷೇತ್ರದಲ್ಲಿ ಯಾತ್ರೆ ಸಂಚರಿಸಲಿದೆ.

ಬೀದರ್ ಉತ್ತರ, ಬೀದರ್ ದಕ್ಷಿಣ, ಬಸವಕಲ್ಯಾಣ ಹಾಗೂ ಹುಮನಾಬಾದ್ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ನಾಲ್ಕು ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಶಾಸಕ ಬಂಡೆಪ್ಪ ಖಾಶೆಂಪುರ (ಬೀದರ್ ದಕ್ಷಿಣ), ರಮೇಶ ಪಾಟೀಲ್ ಸೋಲಪುರ (ಬೀದರ್ ಉತ್ತರ), ಸಿ.ಎಂ. ಫಯಾಜ್ (ಹುಮನಾಬಾದ್) ಹಾಗೂ ಸೈಯದ್ ಯಸ್ರಬ್ ಅಲಿ ಖಾದ್ರಿ (ಬಸವಕಲ್ಯಾಣ) ಅಭ್ಯರ್ಥಿಯಾಗಿದ್ದಾರೆ. ಔರಾದ್ ಹಾಗೂ ಭಾಲ್ಕಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಬೇಕಿದೆ.

ಮೊದಲ ಹಂತದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ತುಮಕೂರು, ರಾಮನಗರದಲ್ಲಿ ಜೆಡಿಎಸ್​ ಪಂಚರತ್ನ ರಥಯಾತ್ರೆ ಯಶಸ್ವಿಯಾಗಿ ಸಂಚರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net