ಪಂಚನಹಳ್ಳಿ ಶಾಲೆ, ಕಾಲೇಜು ಅಭಿವೃದ್ಧಿಗೆ ಬದ್ದ

23KDR3
ಪಂಚನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪ್ರೌಢಶಾಲೆ ವಿಭಾಗದ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಆನಂದ್‌ಮಾತನಾಡಿದರು. ದಿನೇಶ್, ಪ್ರಸನ್ನ, ಮರುಳಪ್ಪ, ಆರ್. ಸಿದ್ದರಾಜುನಾಯ್ಕ ಮತ್ತಿತರಿದ್ದರು.
Published on

ಕಡೂರು: ಶಾಲೆಯಲ್ಲಿ ವಿಶೇಷ ಶಿಕ್ಷಕರ ಕೊರತೆ ಇದ್ದರೂ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕ್ರೀಡಾಕೂಟಕ್ಕೆ ಒತ್ತು ನೀಡುತ್ತಿರುವ ಶಾಲೆ ಆಡಳಿತ ಮಂಡಳಿ ಕಾರ್ಯವೈಖರಿ ಶ್ಲಾಘನೀಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಂಚನಹಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಸುಪ್ತ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ಸಹಕಾರಿಯಾಗಲಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ವಿಶೇಷ ಶಿಕ್ಷಕರ ಕೊರತೆಯಿದೆ. ಆದರೂ ಇರುವ ಶಿಕ್ಷಕರೇ ಮಕ್ಕಳಿಗೆ ಉತ್ತಮ ತರಬೇತಿ ನೀಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದವರೆಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ತೇಜನ ನೀಡಲಾಗುತ್ತಿದೆ ಎಂದರು.
ಕಡೂರು ಪಟ್ಟಣಗಿಂತ ಮೊದಲು ಪಂಚನಹಳ್ಳಿಯಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭವಾಯಿತು. ಇಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ರಾಷ್ಟ್ರಪತಿ ಪ್ರಶಸ್ತಿ ಪಡೆದ ಸಂಚಾರಿ ವಿಜಯ್ ಕೂಡ ಪಂಚನಹಳ್ಳಿ ಗ್ರಾಮದವರು ಎಂಬುದು ಹೆಮ್ಮೆಯ ಸಂಗತಿ. ಯಾವುದೇ ಊರಿಗೆ ಹೋದರು ಅಲ್ಲಿನ ಜನರು ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಕೇಳುತ್ತಾರೆ. ಆದರೆ ಪಂಚನಹಳ್ಳಿ ಗ್ರಾಮಸ್ಥರು ಶಾಲೆ ಮತ್ತು ಕಾಲೇಜು ಅಭಿವೃದ್ಧಿಗೆ ಅನುದಾನ ಕೇಳುವುದು ವಿಶೇಷ. ಹಾಗಾಗಿ ಶಿಥಿಲಗೊಂಡಿರುವ ಶಾಲೆ ಮತ್ತು ಕಾಲೇಜು ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಆದ್ಯತೆ ಮೇರೆಗೆ ಕ್ರಮಕೈಗೊಳ್ಳಲಾಗುವುದು. ಪಂಚನಹಳ್ಳಿಯಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಒತ್ತುನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net