

ಮೈಸೂರು: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನಾನಾ ಸೇವೆಗಳನ್ನು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ‘ಪಂಚಮಿತ್ರ’ ಪೋರ್ಟಲ್ ಅಭಿವೃದ್ಧಿಪಡಿದೆ.
ಗ್ರಾಮೀಣ ಪ್ರದೇಶದ ಜನರು ಕುಳಿತಲ್ಲೇ ನಾನಾ ಸೇವೆಗಳನ್ನು ಪಡೆಯಲು ಹಾಗೂ ತಮ್ಮ ಕುಂದುಕೊರತೆಗಳನ್ನು ದಾಖಲಿಸುವ ಸಲುವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಈ ಸೇವೆಯನ್ನು ಜಾರಿ ಮಾಡಿದೆ.
ಇದರಿಂದ ಜಿಲ್ಲೆಯ ಲಕ್ಷಾಂತರ ರೈತರು ಮತ್ತು ಸಾರ್ವಜನಿಕರಿಗೂ ಅನುಕೂಲವಾಗಿದೆ. ಸಾರ್ವಜನಿಕರು ತಮಗೆ ಅವಶ್ಯವಿರುವ ಗ್ರಾಮ ಪಂಚಾಯಿತಿಗಳ ನಾನಾ ಮಾಹಿತಿ, ಸೇವೆಗಳಿಗೆ ಅರ್ಜಿ ಸಲ್ಲಿಸಲು ಹಲವು ವೆಬ್‌ಸೈಟ್ ಮತ್ತು ಪೋರ್ಟಲ್‌ಗಳನ್ನು ಹುಡುಕಾಡಬೇಕಿತ್ತು. ಅಲ್ಲದೆ ಗ್ರಾ.ಪಂ.ಗಳಿಗೆ ಸಂಬಂಧಿಸಿದ ಎಲ್ಲ ಬಗೆಯ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಿಸಿಕೊಳ್ಳಲು ಯಾವುದೇ ನಿರ್ದಿಷ್ಟವಾದ ‘ತಾಣ’ಗಳಿರಲಿಲ್ಲ. ಹಾಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ರಾಜ್ಯದ ಎಲ್ಲ್ಲ ಗ್ರಾಪಂಗಳ ನಾನಾ ಮಾಹಿತಿ, ವಿವರ, ಸೇವೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿ ಪರಿಶೀಲಿಸಲು ಹಾಗೂ ಕುಂದುಕೊರತೆಗಳನ್ನು ದಾಖಲಿಸಲು ‘ಪಂಚಮಿತ್ರ’ ಎಂಬ ಒಂದೇ ವೇದಿಕೆಯನ್ನು ಆರ್‌ಡಿಪಿಆರ್ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲಾಗಿದೆ.
ರಾಜ್ಯದ 5,951 ಗ್ರಾಮ ಪಂಚಾಯಿತಿಗಳ ದೈನಂದಿನ ಆಡಳಿತ ನಿರ್ವಹಣೆಯಲ್ಲಿ ಈ ತಂತ್ರಾಂಶ ಬಳಸಲಾಗುತ್ತಿದೆ. ಈ ಪೋರ್ಟಲ್‌ನಲ್ಲಿ ಗ್ರಾಮ ಪಂಚಾಯಿತಿಗಳ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ, ಸೇವೆ, ಸ್ವಸಹಾಯ ಗುಂಪಿನ ವಿವರ, ಗ್ರಾ.ಪಂ. ಕಾರ್ಯಕ್ರಮಗಳು ಮತ್ತು ಉಪ ಕ್ರಮಗಳು, 4(1), 4 (1-ಬಿ), ಆರ್‌ಟಿಐ ದಾಖಲೆಗಳು ಮತ್ತಿತರ ಸೇವೆಗಳಿಗೆ ಈ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸೇವೆಗಳನ್ನೂ ಪಡೆಯಬಹುದಾಗಿದೆ. ಅರ್ಜಿಗಳ ಸ್ಥಿತಿಗತಿಯನ್ನೂ ಪರಿಶೀಲಿಸಬಹುದಾಗಿದೆ.