ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಮಹಿಳೆ

Hrr23Jayanthai2
Published on

ಹರಿಹರ: ಕಿತ್ತೂರು ರಾಣಿ ಚನ್ನಮ್ಮ ಅವರು ಬ್ರಿಟಿಷರ ವಿರುದ್ಧ ಹಚ್ಚಿದ ಹೋರಾಟದ ಕಿಚ್ಚು ದೇಶದ ಸ್ವಾಂತಂತ್ರ್ಯ ಹೋರಾಟಕ್ಕೆ ನಾಂದಿಯಾಯಿತು ಎಂದು ಪಂಚಮಸಾಲಿ ಸಮಾಜದ ಮುಖಂಡ ಚಂದ್ರಶೇಖರ್ ಪೂಜಾರ್ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮಳ 247ನೇ ಜಯಂತ್ಯುತ್ಸವ ಹಾಗೂ 201ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಯುವ ಪೀಳಿಗೆ ಚನ್ನಮ್ಮಳ ಜೀವನ ಚರಿತ್ರೆಯನ್ನು ತಿಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.

ಇತಿಹಾಸ ಮರೆತರೆ ಭವಿಷ್ಯದಲ್ಲಿ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ನಾಡಿನ ಅಭಿವೃದ್ಧಿಗೆ ಶ್ರಮಿಸಿದ ವೀರ ಮಹಿಳೆಯ ಜೀವನ ಚರಿತ್ರೆ ಯುವ ಜನಾಂಗಕ್ಕೆ ದಾರಿದೀಪವಾಗಬೇಕೆಂದರು.

ತಾಪಂ ಮಾಜಿ ಸದಸ್ಯ ಮಹಾಂತೇಶ್ ಮಾತನಾಡಿ, ದತ್ತು ಪುತ್ರ ಸ್ವೀಕಾರಕ್ಕೆ ಅವಕಾಶವಿಲ್ಲ ಎಂದು ಬ್ರಿಟಿಷರು ಮಾಡಿದ ಕಾನೂನಿನ ವಿರುದ್ಧ ಹೋರಾಟ ಆರಂಭಿಸಿದ ರಾಣಿ ಅವರ ಜೀವಿತಾಧಿಯಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿ ಕಾಣುತ್ತಿದ್ದರು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರುಗಪ್ಪ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಧುಮುಕಿದ ಪ್ರಥಮ ಮಹಿಳೆ ಎಂಬ ಖ್ಯಾತಿ ಗಳಿಸಿರುವ ಚನ್ನಮ್ಮಳನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಅವರ ಆಡಳಿತಾವಧಿಯಲ್ಲಿ ಸಮ ಸಮಾಜ ನಿರ್ವಣಕ್ಕೆ ಶ್ರಮಿಸಿರುವ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ಉಲ್ಲೇಖವಾಗಿವೆ ಎಂದರು.

18ನೇ ಶತಮಾನದಲ್ಲೇ ಕತ್ತಿವರಸೆ, ಕುದುರೆ ಸವಾರಿ, ಮಲ್ಲಯುದ್ಧ ಕಲಿತು ಸಾಮಾಜಿಕ ಅಡೆತಡೆಗಳನ್ನು ಮೀರಿ, ಗಂಡನ ಮರಣ ಮತ್ತು ಪುತ್ರನ ಶೋಕದ ನಡುವೆ ವೀರರಾಣಿಯಾಗಿ ನಾಡಿನ ರಕ್ಷಣೆಗಾಗಿ ಹೋರಾಡಿದ ದಿಟ್ಟ ಮಹಿಳೆ. ಇಂತಹ ರಾಣಿ ಪ್ರತಿಯೊಂದು ಮನೆಯಿಂದ ಹೊರಹೊಮ್ಮಬೇಕು ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕಾಧ್ಯಕ್ಷ ಡಿ.ಜಿ. ಶಿವಾನಂದಪ್ಪ, ನಗರ ಘಟಕದ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಪ್ರಧಾನ ಕಾರ್ಯದರ್ಶಿ ಶಶಿಧರ ಗೌಡ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಗುಳದಹಳ್ಳಿ ಶೇಖರಪ್ಪ, ಸಾಲಕಟ್ಟಿ ಮಂಜಣ್ಣ, ಕೆ. ಬೇವಿನಹಳ್ಳಿ ಗಂಗಾಧರಪ್ಪ, ಅಮರಾವತಿ ಶಂಕರಪ್ಪ, ನಿಜಲಿಂಗಪ್ಪ, ಕೆ. ಬೇವಿನಹಳ್ಳಿ ಅಂಗಡಿ ನಾಗರಾಜ್, ಲಿಂಗರಾಜ್, ಎಚ್.ಕೆ. ಕೊಟ್ರಪ್ಪ, ನಾಗರಾಜ್ ಕುರವತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net