

ಬೆಳಗಾವಿ: ‘‘ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ಸ್ಥಾನಮಾನ ಸಿಗಲೇಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಒಂದು ದಶಕಕ್ಕಿಂತ ಹೆಚ್ಚು ಕಾಲದಿಂದಲೂ ನಾನು ಬೆಂಬಲ ನೀಡುತ್ತಿದ್ದೇನೆ. ಇದೀಗ ಬಂದವರು ದಿನವೂ ಮೈಕ್ ಹಿಡಿಯುತ್ತಿದ್ದಾರೆ. ಅಂದು ಇವರೆಲ್ಲ ಎಲ್ಲಿದ್ದರು?’’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಪ್ರಶ್ನಿಸಿದ್ದಾರೆ.
‘‘ಹರಿಹರ ಮತ್ತು ಕೂಡಲ ಸಂಗಮ ಪೀಠಗಳ ಸ್ವಾಮೀಜಿಗಳು ಪಂಚಮಸಾಲಿ ಸಮಾಜಕ್ಕೆ ಎರಡು ಕಣ್ಣುಗಳಿದ್ದಂತೆ. ಮೀಸಲಾತಿ ವಿಚಾರವಾಗಿ ಸಮಾಜದ ಮುಖಂಡರು ಹಾಗೂ ಸ್ವಾಮೀಜಿಗಳು ಹೋರಾಟ ನಿಲ್ಲಿಸಿ, ಸರ್ಕಾರದೊಂದಿಗೆ ಮಾತುಕತೆಗೆ ಬರಬೇಕು. 2ಎ ವರ್ಗಕ್ಕೆ ಸೇರಿಸಿದರೆ ಇನ್ನುಳಿದ ವರ್ಗಗಳಲ್ಲಿ ಆಗುವ ಸಾಧಕ-ಬಾಧಕಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ. ಕಾನೂನಾತ್ಮಕವಾಗಿ ಸೂಕ್ತ ಕ್ರಮ ಕೈಗೊಳ್ಳುವವರೆಗೂ ತಾಳ್ಮೆಯಿಂದ ಇರಬೇಕು’’ ಎಂದು ಸುದ್ದಿಗೋಷ್ಠಿಯಲ್ಲಿ ನಿರಾಣಿ ಸಲಹೆ ನೀಡಿದರು.